Wednesday, December 10, 2025

IND vs SA | ಸರಣಿಗೂ ಮುನ್ನ ಸೌತ್ ಆಫ್ರಿಕಾಗೆ ದೊಡ್ಡ ಹೊಡೆತ: ಇಬ್ಬರು ಸ್ಟಾರ್ ಪ್ಲೇಯರ್ಸ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಇನ್ನೇನು ದಿನಗಣನೆ ಆರಂಭವಾಗಿರುವ ನಡುವೆಯೇ ಸೌತ್ ಆಫ್ರಿಕಾ ತಂಡಕ್ಕೆ ಅನಿರೀಕ್ಷಿತ ಹಿನ್ನಡೆ ಎದುರಾಗಿದೆ. ಇತ್ತೀಚೆಗೆ ಏಕದಿನ ಸರಣಿಯನ್ನು ಕಳೆದುಕೊಂಡ ಪ್ರವಾಸಿ ತಂಡಕ್ಕೆ ಇದೀಗ ಇಬ್ಬರು ಪ್ರಮುಖ ಆಟಗಾರರ ಅಲಭ್ಯತೆ ಸಂಕಷ್ಟ ಹೆಚ್ಚಿಸಿದೆ. ಗಾಯದ ಸಮಸ್ಯೆ ಸೌತ್ ಆಫ್ರಿಕಾ ಟೀಮ್ ನಲ್ಲಿ ಆತಂಕ ಮೂಡಿಸಿದ್ದು, ಸರಣಿಗೆ ಮುನ್ನ ತಂಡದ ಸಮತೋಲನವೇ ಪ್ರಶ್ನಾರ್ಥಕವಾಗಿ ಕಂಡುಬಂದಿದೆ.

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2–1 ಅಂತರದಿಂದ ಜಯಿಸಿಕೊಂಡಿತ್ತು. ಈ ಸೋಲಿನಿಂದಲೇ ಹೊರಬರುವ ಮುನ್ನವೇ ಸೌತ್ ಆಫ್ರಿಕಾ ಟಿ20 ಸವಾಲು ಎದುರಿಸಬೇಕಾಗಿದೆ. ಆದರೆ ಈ ಮಹತ್ವದ ಸರಣಿಗೆ ಮುನ್ನ ತಂಡದ ಸ್ಫೋಟಕ ಎಡಗೈ ಬ್ಯಾಟರ್ ಟೋನಿ ಡಿ ಝೋರ್ಝಿ ಗಾಯದ ಕಾರಣವಾಗಿ ಹೊರಗುಳಿದಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮ ಲಯದಲ್ಲಿದ್ದಾಗಲೇ ಕಾಲಿನ ನೋವಿನಿಂದ ಮೈದಾನ ತೊರೆದಿದ್ದ ಝೋರ್ಝಿಗೆ ವೈದ್ಯರು ವಿಶ್ರಾಂತಿ ಅಗತ್ಯವೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ಇದಷ್ಟೇ ಅಲ್ಲದೆ, ಯುವ ವೇಗಿ ಕ್ವೆನಾ ಮಫಕಾ ಕೂಡ ಎಡ ಮಂಡಿ ಸ್ನಾಯು ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಅನುಭವೀ ವೇಗ ಬೌಲರ್ ಲುಥೊ ಸಿಪಾಮ್ಲರನ್ನು ತಂಡಕ್ಕೆ ಕರೆಸಲಾಗಿದೆ. ನಾಯಕ ಐಡನ್ ಮಾರ್ಕ್ರಾಮ್ ನೇತೃತ್ವದ ಸೌತ್ ಆಫ್ರಿಕಾ ತಂಡ ಹೊಸ ಸಂಯೋಜನೆಯೊಂದಿಗೆ ಭಾರತ ತಂಡವನ್ನು ಎದುರಿಸಬೇಕಾಗಿದೆ.

error: Content is protected !!