Sunday, September 14, 2025

ಆಸ್ಟ್ರೇಲಿಯಾ A ವಿರುದ್ಧ ಭಾರತ ತಂಡ ಪ್ರಕಟ: ಯುವ ಆಟಗಾರರಿಗೆ ಲಭಿಸಿದೆ ಭರಪೂರ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಸ್ಟ್ರೇಲಿಯಾ A ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಭಾರತ A ತಂಡವನ್ನು ಪ್ರಕಟಿಸಿದೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 5ರವರೆಗೆ ನಡೆಯಲಿರುವ ಈ ಸರಣಿಗೆ ರಜತ್ ಪಾಟಿದಾರ್ ಮತ್ತು ತಿಲಕ್ ವರ್ಮಾ ತಲಾ ನಾಯಕತ್ವ ವಹಿಸಲಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶ ಸ್ಪಷ್ಟವಾಗಿ ಗೋಚರಿಸಿದರೂ, ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

2025ರ ಐಪಿಎಲ್ ಮುಗಿದ ನಂತರದಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಯಾವುದೇ ಸ್ಪರ್ಧಾತ್ಮಕ ಪಂದ್ಯ ಆಡಿಲ್ಲ. ಇಬ್ಬರೂ T20I ಮತ್ತು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಕೇವಲ ಏಕದಿನ ಪಂದ್ಯಗಳಲ್ಲಿ ಮುಂದುವರಿಯುತ್ತಿದ್ದಾರೆ. ಅಭಿಮಾನಿಗಳು ಇವರ ವಾಪಸ್ಸಿಗೆ ನಿರೀಕ್ಷಿಸಿದ್ದರೂ, BCCI ಈ ಸರಣಿಯಲ್ಲಿ ಇವರನ್ನು ಒಳಗೊಂಡಿಲ್ಲ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಅಕ್ಟೋಬರ್ 19ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗುವ ಒಡಿಐ ಸರಣಿಗೆ ತಯಾರಾಗಲು ಅವಕಾಶ ನೀಡಲಾಗಿದೆ.

ಈ ಬಾರಿ ಭಾರತ A ತಂಡದಲ್ಲಿ ಯುವ ಪ್ರತಿಭೆಗಳಾದ ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಯಾನ್ ಪರಾಗ್ ಮತ್ತು ಅರ್ಶ್‌ದೀಪ್ ಸಿಂಗ್ ಮುಂತಾದವರಿಗೆ ಹೆಚ್ಚು ಅವಕಾಶ ಸಿಕ್ಕಿದೆ. ಭವಿಷ್ಯದ ಒಡಿಐ ವಿಶ್ವಕಪ್ 2027 ಗುರಿಯಾಗಿಸಿಕೊಂಡು ಬೆಂಚ್ ಸ್ಟ್ರೆಂಥ್ ಬಲಪಡಿಸುವ ಉದ್ದೇಶದಿಂದ ಈ ಆಯ್ಕೆ ನಡೆದಿದೆ.

ಮೊದಲ ಪಂದ್ಯಕ್ಕೆ ರಜತ್ ಪಾಟಿದಾರ್ ನಾಯಕತ್ವ
ಸೆಪ್ಟೆಂಬರ್ 30ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ರಜತ್ ಪಾಟಿದಾರ್ ನಾಯಕತ್ವ ವಹಿಸಲಿದ್ದಾರೆ. ಈ ತಂಡದಲ್ಲಿ ಒಟ್ಟು 13 ಆಟಗಾರರನ್ನು ಘೋಷಿಸಲಾಗಿದ್ದು, ಪ್ರಿಯಾಂಶ್ ಆರ್ಯಾ ಮತ್ತು ಸಿಮರ್‌ಜೀತ್ ಸಿಂಗ್ ಮೊದಲ ಪಂದ್ಯಕ್ಕೆ ಮಾತ್ರ ಲಭ್ಯರಿದ್ದಾರೆ.

ಎರಡನೇ ಮತ್ತು ಮೂರನೇ ಪಂದ್ಯಗಳಿಗೆ ತಿಲಕ್ ವರ್ಮಾ ನಾಯಕ
ಅಕ್ಟೋಬರ್ 3 ಮತ್ತು 5ರಂದು ನಡೆಯಲಿರುವ ಎರಡನೇ ಹಾಗೂ ಮೂರನೇ ಪಂದ್ಯಗಳಿಗೆ ತಿಲಕ್ ವರ್ಮಾ ನಾಯಕತ್ವ ವಹಿಸಲಿದ್ದಾರೆ. ಈ ವೇಳೆ ಏಷ್ಯಾ ಕಪ್‌ನಿಂದ ಮರಳುವ ತಿಲಕ್ ವರ್ಮಾ, ಅಭಿಷೇಕ್ ಶರ್ಮಾ, ಅರ್ಶ್‌ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಂಡವನ್ನು ಬಲಪಡಿಸಲಿದ್ದಾರೆ. ಈ ಕಾರಣದಿಂದ ಕೊನೆಯ ಎರಡು ಪಂದ್ಯಗಳಲ್ಲಿ ಭಾರತ A ಇನ್ನಷ್ಟು ಶಕ್ತಿಯುತ ತಂಡವಾಗಿ ಮೈದಾನಕ್ಕಿಳಿಯಲಿದೆ.

ಇದನ್ನೂ ಓದಿ