ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಶಕ್ತಿಶಾಲಿ ಸಂದೇಶ ರವಾನಿಸಿದೆ. ಆರಂಭಿಕ ಹಂತದಲ್ಲೇ ಬ್ಯಾಟಿಂಗ್ ಕುಸಿತ ಕಂಡ ಟೀಮ್ ಇಂಡಿಯಾ, ಹಾರ್ದಿಕ್ ಪಾಂಡ್ಯ ಸ್ಫೋಟಕ ಇನ್ನಿಂಗ್ಸ್‌ನಿಂದ ಅಚ್ಚರಿಯತ್ತ ತಿರುಗಿತು. 14 ಓವರ್‌ಗಳ ವೇಳೆಗೆ ಕೇವಲ 103 ರನ್ ಗಳಿಸಿದ್ದ ಭಾರತ, ಪಾಂಡ್ಯ ಕ್ರೀಸ್‌ಗೆ ಬಂದ ಬಳಿಕ ಸಂಪೂರ್ಣವಾಗಿ ಹೊಸ ರೂಪ ಪಡೆದುಕೊಂಡಿತು.
ಟಿ20 ಪಂದ್ಯದಲ್ಲಿ ಭಾರತ ಸಾಧಿಸಿದ ಭರ್ಜರಿ ಜಯಕ್ಕಿಂತಲೂ, ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಆಡಿದ ಮಾತುಗಳು ಹೆಚ್ಚು ಗಮನ ಸೆಳೆದವು. ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪಾಂಡ್ಯ, ತಮ್ಮ ಶಾಟ್‌ಗಳ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ ಎಂದು ಹೇಳಿದರು. ಪಿಚ್ ಸ್ವಲ್ಪ ಕಷ್ಟಕರವಾಗಿತ್ತು. ಆದರೆ ಅಂತಹ ಸಂದರ್ಭಗಳಲ್ಲೇ ಆತ್ಮವಿಶ್ವಾಸದಿಂದ ಆಟವಾಡಬೇಕು. ನಾನು ಪವರ್‌ಗೆ ಬದಲಾಗಿ ಟೈಮಿಂಗ್ ಮೇಲೆ ಹೆಚ್ಚು ಗಮನ ಕೊಟ್ಟೆ. ಅದೇ ನನಗೆ ಸಹಾಯವಾಯಿತು, ಎಂದು ತಿಳಿಸಿದರು.
ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ಫಿಟ್‌ನೆಸ್ ಮೇಲೆ ಹೆಚ್ಚಿನ ಕೆಲಸ ಮಾಡಿದ್ದೇನೆ ಎಂದು ಹಾರ್ದಿಕ್ ಒತ್ತಿ ಹೇಳಿದರು. “ಕಳೆದ ಆರು–ಏಳು ತಿಂಗಳುಗಳು ಫಿಟ್‌ನೆಸ್ ದೃಷ್ಟಿಯಿಂದ ಬಹಳ ಮುಖ್ಯವಾಗಿದ್ದವು. ಸುಮಾರು 50 ದಿನ ನಾನು ನನ್ನ ಕುಟುಂಬದಿಂದ ದೂರವಿದ್ದು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಸಮಯ ಕಳೆದೆ. ಈಗ ಅದರ ಫಲಿತಾಂಶಗಳು ಕಾಣಿಸುತ್ತಿರುವುದು ಸಂತೋಷ ಕೊಡುತ್ತದೆ,” ಎಂದರು.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು, ವೈಯಕ್ತಿಕ ಗುರಿಗಿಂತಲೂ ತಂಡ ಹಾಗೂ ದೇಶದ ಅಗತ್ಯವೇ ಮುಖ್ಯ ಎಂದು ಸ್ಪಷ್ಟಪಡಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ತಂಡಕ್ಕೆ ನನ್ನ ಶಕ್ತಿ ನೀಡುವುದು ನನ್ನ ಧ್ಯೇಯ, ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

