ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಡಿಸೆಂಬರ್ 11ರಂದು ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆತ್ಮವಿಶ್ವಾಸದಿಂದಿರುವ ಟೀಮ್ ಇಂಡಿಯಾ ಅದೇ ತಂಡವನ್ನು ಮುಂದುವರೆಸುವ ಸಾಧ್ಯತೆ ಹೆಚ್ಚು ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ಜೋರಾಗಿದೆ.
ಮೊದಲ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣದ ಆಟ ಪ್ರದರ್ಶಿಸಿದ ಟೀಮ್ ಇಂಡಿಯಾ, ಬದಲಾವಣೆಗಳ ಅಗತ್ಯವಿಲ್ಲ ಎಂಬ ಸಂದೇಶವನ್ನು ಕೋಚ್ ಮತ್ತು ತಂಡದ ನಿರ್ವಹಣೆ ನೀಡಿದೆ.
ಕಟಕ್‌ನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಪ್ರದರ್ಶಿಸಿದ ಶಿಸ್ತುಬದ್ಧ ದಾಳಿ ತಂಡಕ್ಕೆ ದೊಡ್ಡ ಶಕ್ತಿ ನೀಡಿದೆ. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್‌ಗಳ ಆರಂಭಿಕ ಸ್ಪೆಲ್ ಎದುರಾಳಿ ಬ್ಯಾಟಿಂಗ್‌ನ್ನು ಕಟ್ಟಿ ಹಾಕಿತ್ತು. ಮಧ್ಯ ಓವರ್‌ಗಳಲ್ಲಿ ವರುಣ್ ಚಕ್ರವರ್ತಿಯ ಚಾಕಚಕ್ಯತೆ ಪಂದ್ಯ ದಿಕ್ಕು ತಿರುಗಿಸಿತ್ತು. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.
ಬ್ಯಾಟಿಂಗ್ ಸಾಲಿನಲ್ಲಿಯೂ ಸ್ಥಿರತೆ ಕಾಯ್ದುಕೊಳ್ಳಲು ನಿರ್ಧಾರವಾಗುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಅಲ್ಪ ಮೊತ್ತಕ್ಕೆ ಔಟಾಗಿದ್ದರೂ, ಅವರಿಗೆ ಮತ್ತೊಂದು ಅವಕಾಶ ನೀಡುವ ಲೆಕ್ಕಾಚಾರ ತಂಡದಲ್ಲಿದೆ. ನಾಯಕ ಸೂರ್ಯಕುಮಾರ್ ಯಾದವ್ ಮಧ್ಯ ಕ್ರಮಾಂಕಕ್ಕೆ ಸ್ಥಿರತೆ ನೀಡಲಿದ್ದಾರೆ. ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ಆಲ್‌ರೌಂಡ್ ಕೊಡುಗೆ ನೀಡುವ ನಿರೀಕ್ಷೆಯಿದೆ. ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಸ್ಥಾನ ಭದ್ರವಾಗಿದೆ.
ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಸೇರಿದಂತೆ ಕೆಲವರು ಮತ್ತೊಮ್ಮೆ ಬೆಂಚ್‌ನಲ್ಲೇ ಉಳಿಯುವ ಸಾಧ್ಯತೆ ಕಂಡುಬರುತ್ತಿದೆ. ಎರಡನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಗೆಲುವಿನ ಲಯ ಮುಂದುವರೆಸುವಲ್ಲಿ ಗಮನಹರಿಸಿದೆ.

