Wednesday, September 3, 2025

ನದಿ ಮಧ್ಯೆ 20 ಗಂಟೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ಭಾರತೀಯ ವಾಯುಪಡೆ ಹೆಲಿಕಾಪ್ಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಡಿಶಾ-ಛತ್ತೀಸ್‌ಗಢ ರಾಜ್ಯಗಳ ಗಡಿಯಲ್ಲಿನ ಸಬೇರಿ ನದಿ ಮಧ್ಯದಲ್ಲಿರುವ ಬಂಡೆಯ ಮೇಲೆ ಸುಮಾರು 20 ಗಂಟೆ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.

ರಕ್ಷಿಸಲಾದ ವ್ಯಕ್ತಿಯನ್ನು ಇರ್ಮಾ ಸೋಡಿ ಎಂದು ಗುರುತಿಸಲಾಗಿದೆ. ಇವರು ಮಲ್ಕನ್‌ಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಮಾಟೆರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಇರ್ಮಾ ದಿನಗೂಲಿ ಕೆಲಸಕ್ಕಾಗಿ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ತೆಲವರ್ತಿ ಗ್ರಾಮಕ್ಕೆ ಮರದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ವಾಪಸ್ ಮನೆಗೆ ಹಿಂದಿರುಗುತ್ತಿದ್ದಾಗ ನೀರು ನುಗ್ಗಿ ದೋಣಿ ಮಗುಚಿದೆ. ಆಗ ಅಲ್ಲಿಯೇ ಅರ್ಧ ಮುಳುಗಿದ್ದ ಮರದ ಕೊಂಬೆಯನ್ನು ಹಿಡಿದುಕೊಂಡು ಯಾರ ಸಹಾಯವಿಲ್ಲದೇ ರಾತ್ರಿಯಿಡೀ ಕಳೆದಿದ್ದಾರೆ.

ಬೆಳಗಿನ ಜಾವ ಹತ್ತಿರದಲ್ಲಿದ್ದ ಬಂಡೆಯ ಮೇಲೆ ಹತ್ತಿ ಅಲ್ಲಿಯೇ ನಿಂತಿದ್ದರು. ಮರುದಿನ ಬೆಳಗ್ಗೆ ಸ್ಥಳೀಯ ಗ್ರಾಮಸ್ಥರು ಗಮನಿಸಿ ಮಲ್ಕನ್‌ಗಿರಿ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನಂತರ ಮಲ್ಕನ್‌ಗಿರಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಛತ್ತೀಸ್‌ಗಢದ ತಮ್ಮ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿದ್ದಾರೆ.

ನಂತರ ಸುಕ್ಮಾ ಪೊಲೀಸರು ಸಿಆರ್‌ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಭಾರತೀಯ ವಾಯುಪಡೆಯನ್ನು ಸಂಪರ್ಕಿಸಿದ್ದಾರೆ. ಇದಾದ ಬಳಿಕ ಜಗದಲ್‌ಪುರದಿಂದ ಬಂದ ರಕ್ಷಣಾ ಹೆಲಿಕಾಪ್ಟರ್ ಇರ್ಮಾ ಅವರನ್ನು ನದಿಯಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದೆ. ಇದೀಗ ಅವರನ್ನು ಸುಕ್ಮಾದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇರ್ಮಾ ಆರೋಗ್ಯ ಸ್ಥಿರವಾಗಿದೆ. ಸಂಪೂರ್ಣ ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ