Friday, December 12, 2025

ಇಂದಿರಾ ಕ್ಯಾಂಟೀನ್ @ ಟೂ-ಇನ್-ಒನ್: ಬಡವರ ಊಟದ ಮನೆ ಈಗ KMF ಮಾರಾಟ ಮಳಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳ ಸಮರ್ಪಕ ನಿರ್ವಹಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಆಲೋಚನೆಯನ್ನು ಮಾಡಿದೆ. ಕಡಿಮೆ ದರದಲ್ಲಿ ಬಡವರಿಗೆ ಊಟ ನೀಡುವ ಈ ಕ್ಯಾಂಟೀನ್‌ಗಳು, ಊಟದ ಸಮಯದ ನಂತರ ಹೆಚ್ಚಿನ ಅವಧಿ ಮುಚ್ಚಿರುವುದನ್ನು ತಪ್ಪಿಸಿ, ಅದನ್ನು ಇತರ ಉದ್ದೇಶಗಳಿಗೂ ಬಳಸಲು GBA ಚಿಂತನೆ ನಡೆಸಿದೆ.

ಪ್ರಸ್ತುತ, ಕ್ಯಾಂಟೀನ್‌ಗಳು ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುವ ನಿಗದಿತ ಸಮಯದಲ್ಲಿ ಮಾತ್ರ ತೆರೆದಿರುತ್ತವೆ. ಉಳಿದ ಸಮಯದಲ್ಲಿ ಈ ಅಮೂಲ್ಯವಾದ ಜಾಗಗಳು ಖಾಲಿಯಾಗಿ ಉಳಿಯುತ್ತಿವೆ. ಈ ಹಿತಾಸಕ್ತಿ ಕೊರತೆಯನ್ನು ನಿವಾರಿಸಲು, ಕ್ಯಾಂಟೀನ್‌ಗಳ ಆವರಣದಲ್ಲಿ ಕೆಎಂಎಫ್‌ನ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡಲು GBA ಉದ್ದೇಶಿಸಿದೆ.

ಈ ವಿಚಾರವಾಗಿ ಮಾತನಾಡಿರುವ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, “ನಗರದ ಬಹುತೇಕ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಸುಸಜ್ಜಿತವಾಗಿ ನಿರ್ಮಾಣಗೊಂಡಿವೆ. ನಿಗದಿತ ಸಮಯದ ಹೊರತಾಗಿ ಈ ಅಮೂಲ್ಯವಾದ ಜಾಗವನ್ನು ಖಾಲಿ ಬಿಡುವುದಕ್ಕಿಂತ, ಕೆಎಂಎಫ್‌ನ ಹಾಲು, ಮೊಸರು ಹಾಗೂ ಇತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಜಿಬಿಎಯ ಈ ಪ್ರಸ್ತಾವನೆಯು ಕೆಎಂಎಫ್‌ನ ಬೆಳವಣಿಗೆಗೆ ಪೂರಕವಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವ ಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೇವಲ ಕಡಿಮೆ ದರದಲ್ಲಿನ ಊಟ, ತಿಂಡಿ ಮಾತ್ರವಲ್ಲದೆ, ನಂದಿನಿಯ ಹಾಲು, ಮೊಸರು, ಮಜ್ಜಿಗೆ ಸೇರಿದಂತೆ ವಿವಿಧ ಉತ್ಪನ್ನಗಳು ಜನಸಾಮಾನ್ಯರಿಗೆ ದೊರೆಯುವ ಸಾಧ್ಯತೆ ಇದೆ. ಈ ಕ್ರಮವು ಕ್ಯಾಂಟೀನ್‌ಗಳ ನಿರ್ವಹಣೆಯನ್ನು ಉತ್ತಮಗೊಳಿಸಲು ಮತ್ತು ಸ್ಥಳಗಳ ಸಮರ್ಪಕ ಬಳಕೆಗೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

error: Content is protected !!