ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆ ಕುರಿತು ಮತ್ತೆ ಭಾರೀ ಚರ್ಚೆ ಆರಂಭವಾಗಿದೆ. ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಉಪಲೋಕಾಯುಕ್ತ ಜಸ್ಟಿಸ್ ಬಿ. ವೀರಪ್ಪ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕಠಿಣ ಪದಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ಇರುವುದನ್ನೇ ಒಪ್ಪಿಕೊಂಡು ಕೇವಲ ಸಾರ್ವಜನಿಕವಾಗಿ ಮಾತನಾಡುವುದರಿಂದ ಪ್ರಯೋಜನವೇನು ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.
ಉಪಲೋಕಾಯುಕ್ತರು ಶೇ.63ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಿರುವಾಗ, ಆ ಮಾಹಿತಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲು ಏಕೆ ಮುಂದಾಗುತ್ತಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಅಧಿಕಾರ ಸ್ವೀಕರಿಸಿದ ನಂತರ ತನಿಖೆ ನಡೆಸಿ ದಾಖಲೆ ಸಂಗ್ರಹಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆ ಹೊರತು, ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದರಲ್ಲಿ ಮಾತ್ರ ಸೀಮಿತವಾಗಿರುವುದು ಅರ್ಥವಿಲ್ಲ ಎಂದು ಅವರು ಟೀಕಿಸಿದ್ದಾರೆ. ಭ್ರಷ್ಟಾಚಾರ ಗೊತ್ತಿದ್ದರೂ ಕ್ರಮವಿಲ್ಲದಿದ್ದರೆ ಆ ವ್ಯವಸ್ಥೆಯೇ ಪ್ರಶ್ನೆಗೆ ಒಳಗಾಗುತ್ತದೆ ಎಂಬುದು ಅವರ ಅಭಿಪ್ರಾಯ.

