ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ನಟಿ ಹಾಗೂ ನೃತ್ಯಗಾರ್ತಿ ನೋರಾ ಫತೇಹಿ ಅವರು ಶನಿವಾರ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಬೈನಲ್ಲಿ ನಡೆಯುತ್ತಿದ್ದ ‘ಸನ್‌ಬರ್ನ್’ ಸಂಗೀತ ಉತ್ಸವಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ನೋರಾ ಅವರು ಡೇವಿಡ್ ಗುಟ್ಟಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ವೇಗವಾಗಿ ಬಂದು ನೋರಾ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನೋರಾ ಅವರು ಒಂದು ತುದಿಯಿಂದ ಮತ್ತೊಂದು ತುದಿಗೆ ಎಸೆಯಲ್ಪಟ್ಟಿದ್ದಾರೆ. ಅವರ ತಲೆ ಕಾರಿನ ಕಿಟಕಿ ಗಾಜಿಗೆ ಜೋರಾಗಿ ಬಡಿದು ಗಂಭೀರ ಪೆಟ್ಟು ಬಿದ್ದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ, ಆ ಕ್ಷಣದ ಆತಂಕವನ್ನು ಹೀಗೆ ಹಂಚಿಕೊಂಡಿದ್ದಾರೆ:
“ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ, ಆದರೆ ಆ ಕ್ಷಣ ಅತ್ಯಂತ ಭಯಾನಕವಾಗಿತ್ತು. ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ಕಾರಿಗೆ ಡಿಕ್ಕಿ ಹೊಡೆದಾಗ ನಾನು ಕಿಟಕಿಗೆ ಹೋಗಿ ಬಡಿದುಕೊಂಡೆ. ಆ ಕ್ಷಣದಲ್ಲಿ ಸಾವು ಕಣ್ಣೆದುರೇ ಬಂದು ಹೋದಂತಾಯಿತು. ನಾನು ಇಂದು ಬದುಕಿರುವುದೇ ದೊಡ್ಡ ಅದೃಷ್ಟ. ಈ ಆಘಾತದಿಂದ ಹೊರಬರಲು ನನಗೆ ಸಮಯ ಬೇಕು.” ಎಂದು ಹೇಳಿದ್ದಾರೆ.
ಘಟನೆಯ ನಂತರ ನಟಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು, ಅಪಘಾತಕ್ಕೆ ಕಾರಣವಾದ ಕುಡುಕ ಚಾಲಕನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ‘ಮದ್ಯಪಾನ ಮಾಡಿ ವಾಹನ ಚಾಲನೆ’ ಹಾಗೂ ‘ಅತಿ ವೇಗದ ಚಾಲನೆ’ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

