ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆ ಇರುವ ಮುನ್ಸೂಚನೆ ಹವಾಮಾನ ಇಲಾಖೆಯಿಂದ ನೀಡಲಾಗಿದೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ರಾಜ್ಯದ ಹಲವೆಡೆ ಧಾರಾಕಾರ ಮಳೆ ಬೀಳುವ ಸಾಧ್ಯತೆ ಇದೆ. ವಾಯುಭಾರ ಕುಸಿತದಿಂದಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ತೀವ್ರ ಮಳೆ ಆಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 30ರ ವೇಳೆಗೆ ಚಂಡಮಾರುತವೂ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಕರಾವಳಿಯ ಮೀನುಗಾರರಿಗೆ ವಿಶೇಷ ಎಚ್ಚರಿಕೆ:
ಕರಾವಳಿಯಲ್ಲಿ ಇಂದು ಗಾಳಿಯ ವೇಗ 50-60 ಕಿ.ಮೀ. ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಸಮುದ್ರದ ಪ್ರಕ್ಷುಬ್ಧ ಸ್ಥಿತಿಯಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶಗಳಲ್ಲಿ ಮಳೆ ತೀವ್ರವಾಗಲಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಅಕ್ಟೋಬರ್ 2ರವರೆಗೆ ಮುಂದುವರಿಯುವ ಸಾಧ್ಯತೆ ಇದೆ.
ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ದಕ್ಷಿಣ ಕನ್ನಡ, ಉಡುಪಿ ಮತ್ತು ಯಾದಗಿರಿ ಸೇರಿದಂತೆ ಒಟ್ಟು 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬರುವ ನಿರೀಕ್ಷೆ ಇದೆ.