Saturday, October 25, 2025

ನಾನು ಮಂತ್ರಿಯಾದ ಮಾತ್ರಕ್ಕೆ ಬೇಕಾಬಿಟ್ಟಿ ನಿರ್ಧಾರ ಸಾಧ್ಯವಿಲ್ಲ, ನಿಯಮ ಪಾಲಿಸಿದ್ದೇನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್​ಎಸ್‌ಎಸ್​ ಪಥಸಂಚಲನದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರ ಅಮಾನತಿನ ಕುರಿತು ಎದ್ದಿರುವ ಟೀಕೆಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, “ನಾನು ಮಂತ್ರಿಯಾದ ಮಾತ್ರಕ್ಕೆ ನನಗೆ ಬೇಕಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನಗೂ ನಿರ್ದಿಷ್ಟ ನಿಯಮಾವಳಿಗಳಿವೆ. ಅದರ ಪ್ರಕಾರವೇ ಸರ್ಕಾರಿ ನೌಕರರ ಅಮಾನತಿನ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ತಿಳಿಸಿದರು. ನಿಯಮಾವಳಿಗಳನ್ನು ಉಲ್ಲಂಘಿಸಿರುವುದರಿಂದಲೇ ಅಮಾನತು ಮಾಡಲಾಗಿದೆ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಆರ್​ಎಸ್‌ಎಸ್ ಪ್ರಾಯೋಜಕರಿಗೆ ಪ್ರಶ್ನೆ:

ಇದೇ ಸಂದರ್ಭದಲ್ಲಿ, ಆರ್​ಎಸ್‌ಎಸ್‌ನ ಹಣಕಾಸು ಮೂಲದ ಕುರಿತು ಪ್ರಿಯಾಂಕ್ ಖರ್ಗೆ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದರು. “ನಾನು ದಲಿತ ಸಂಘಟನೆಗಳ ಪ್ರಾಯೋಜಕತ್ವ ವಹಿಸಿದ್ದೇನೆಂದಾದರೆ, ನೋಂದಣಿಯಾಗದ ಸಂಘಟನೆಯಾದ ಆರ್​ಎಸ್‌ಎಸ್‌ನ ಪ್ರಾಯೋಜಕರು ಯಾರು?” ಎಂದು ಅವರು ನೇರ ಪ್ರಶ್ನೆ ಹಾಕಿದರು.

ಇಂತಹ ನೋಂದಾಯಿಸದ ಸಂಘಟನೆಗಳಿಗೆ ಬಟ್ಟೆ ಹೊಲಿಸಲು ಮತ್ತು ಕಟ್ಟಡಗಳನ್ನು ನಿರ್ಮಿಸಲು ಹಣ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆಯೂ ಸಚಿವರು ಅನುಮಾನ ವ್ಯಕ್ತಪಡಿಸಿದರು. ಒಟ್ಟಿನಲ್ಲಿ, ಸರ್ಕಾರಿ ನೌಕರರ ಅಮಾನತು ನಿರ್ಧಾರವು ನಿಯಮಗಳ ಅನ್ವಯವೇ ನಡೆದಿದೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದು, ಆರ್​ಎಸ್‌ಎಸ್‌ನ ಕಾರ್ಯವೈಖರಿ ಮತ್ತು ಹಣಕಾಸಿನ ಮೂಲದ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನಿಸಿರುವುದು ಗಮನ ಸೆಳೆದಿದೆ.

error: Content is protected !!