ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಸೃಷ್ಟಿಯಾಗಿದೆ.
ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಜೋರು ಜಟಾಪಟಿ ನಡೆದಿದೆ. ಈ ವೇಳೆ ರಾಜೀನಾಮೆ ಕೊಟ್ಟು ಸಚಿವ ಸ್ಥಾನದಲ್ಲಿ ಕೂರಬಾರದು ಅಂತ ವಿಪಕ್ಷ ನಾಯಕರು ಪಟ್ಟು ಹಿಡಿದಿದ್ದಾರೆ.
ಮಧ್ಯಾಹ್ನದ ಅಧಿವೇಶನ ಪುನರಾರಂಭ ಆಗುತ್ತಿದ್ದಂತೆ ವಿಪಕ್ಷಗಳು ರಾಜಣ್ಣರ ರಾಜೀನಾಮೆ ವಿಷಯ ಪ್ರಸ್ತಾಪಿಸಿದವು. ನನಗೆ ತಿಳಿದ ಪ್ರಕಾರ ರಾಜಣ್ಣ ರಾಜೀನಾಮೆ ಕೊಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸಬೇಕು. ಅವರು ರಾಜೀನಾಮೆ ನೀಡಿದ್ದರೆ ಆ ಸ್ಥಳದಲ್ಲಿ ಕೂತಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಹಾಗೂ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಅಶೋಕ್ (R Ashok) ಮಾತನಾಡ್ತಾ, ರಾಜೀನಾಮೆ ಕೊಟ್ಟು ಹೇಗೆ ಸಚಿವ ಸ್ಥಾನದಲ್ಲಿ ಕೂರ್ತಾರೆ? ನಮಗೆ ಗೊತ್ತಿದೆ ಅವರು ರಾಜೀನಾಮೆ ಕೊಟ್ಟಿದ್ದಾರೆ. ಏನು ಅಂತ ಮೊದಲು ಹೇಳಲಿ, ರಾಜಣ್ಣಗೆ ನಾಚಿಕೆ ಆಗಲ್ವಾ? ರಾಜಣ್ಣ ನೀನು ಪಾಕಿಸ್ತಾನದಿಂದ ಬಂದಿದೀಯಾ? ಒಂದು ಉತ್ತರ ಕೊಡಲು ಆಗಲ್ವಾ? ನಿಮಗೆ ನಾಚಿಗೆ ಆಗಲ್ವಾ? ಅಂತಲೂ ಪ್ರಶ್ನೆ ಮಾಡಿದರು.
ವಿಪಕ್ಷಗಳ ಜಟಾಪಟಿ ಜೋರಾಗುತ್ತಿದ್ದಂತೆ ಮೌನ ಮುರಿದ ರಾಜಣ್ಣ, ನನಗೆ ಕಾನೂನು ಸಚಿವರು ಮಾತನಾಡಬೇಡ ಎಂದಿದ್ದಾರೆ. ಅಶೋಕ್ ಅವ್ರೇ ಕೀಳು ಮಟ್ಟದ ಮಾತು ಬೇಡ. ರಾಜೀನಾಮೆ ಕೊಟ್ಟಿದ್ದೇನೋ ಬಿಟ್ಟಿದ್ದೇನೋ ಬಿಡಿ. ಸಿಎಂ ಅದಕ್ಕೆಲ್ಲ ಉತ್ತರ ಕೊಡುತ್ತಾರೆ ಎಂದರು.