ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 2 ರಂದು ತೆರೆ ಕಂಡ ‘ಕಾಂತಾರ: ಚಾಪ್ಟರ್ 1’ ಪ್ರೇಕ್ಷಕರನ್ನು ಆಕರ್ಷಿಸುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಬಿಡುಗಡೆಯ ನಾಲ್ಕೇ ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಿರುವ ಈ ಚಿತ್ರ ಎಲ್ಲರ ಗಮನ ಸೆಳೆದಿದೆ. ದಸರಾ ಹಾಗೂ ಗಾಂಧಿಜಯಂತಿ ರಜೆಯ, ಜೊತೆಗೆ ಸಿಕ್ಕಿರುವ ಪಾಸಿಟಿವ್ ಪ್ರತಿಕ್ರಿಯೆ ಸಿನಿಮಾಗೆ ಅದ್ಭುತ ಯಶಸ್ಸು ತರಲು ಕಾರಣವಾಗಿದೆ.
ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ 62 ಕೋಟಿ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ 45.4 ಕೋಟಿ ರೂಪಾಯಿ, ಮೂರನೇ ದಿನ 55 ಕೋಟಿ ರೂಪಾಯಿ ಹಾಗೂ ಭಾನುವಾರ 61 ಕೋಟಿ ರೂಪಾಯಿ ಕಲೆಕ್ಷನ್ ದಾಖಲಿಸಿತು. ಈ ಮೂಲಕ ನಾಲ್ಕು ದಿನಗಳ ಒಟ್ಟು ಆದಾಯ 223.25 ಕೋಟಿಯ ಮಟ್ಟ ತಲುಪಿದೆ.
ಚಿತ್ರಕ್ಕೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯಿಂದ ಪ್ರೇಕ್ಷಕರು ಹೆಚ್ಚಾಗಿ ಚಿತ್ರಮಂದಿರದತ್ತ ಹರಿದುಬಂದಿದ್ದಾರೆ. ವಿಶೇಷವಾಗಿ ರಿಷಬ್ ಶೆಟ್ಟಿ ಅಭಿನಯಿಸಿದ ‘ಬೆರ್ಮೆ’ ಪಾತ್ರ ಹಾಗೂ ಅವರ ನಿರ್ದೇಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಂ ಸೇರಿದಂತೆ ಇತರೆ ಕಲಾವಿದರ ಪಾತ್ರವೂ ಗಮನ ಸೆಳೆದಿದೆ.
ಪ್ರಸ್ತುತ ವಾರದಲ್ಲಿಯೂ ಉತ್ತಮ ಕಲೆಕ್ಷನ್ ನಿರೀಕ್ಷಿಸಲಾಗಿದ್ದು, ದೀಪಾವಳಿ ಹಬ್ಬದ ಸಮಯದಲ್ಲಿ ಚಿತ್ರದ ಬಾಕ್ಸ್ ಆಫೀಸ್ ದಾಖಲೆ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.