Sunday, October 19, 2025

‘ಕಾಂತಾರ ಅಧ್ಯಾಯ 1’: ಅಭಿಮಾನಿಗಳ ಮನ ಗೆದ್ದ ಶಿವ ಭಜನೆಯ ‘ಬ್ರಹ್ಮಕಲಶ’ ಹಾಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಕಾಂತಾರ ಅಧ್ಯಾಯ 1 ಚಿತ್ರದ ಬಿಡುಗಡೆಯ ಕೌಂಟ್‌ಡೌನ್ ಆರಂಭವಾದ ಬೆನ್ನಲ್ಲೇ, ಚಿತ್ರತಂಡ ಮಧ್ಯರಾತ್ರಿ ಮೊದಲ ಹಾಡು ಬ್ರಹ್ಮಕಲಶ ಅನ್ನು ಬಿಡುಗಡೆ ಮಾಡಿದೆ. ಕೇವಲ ಆಡಿಯೋ ರೂಪದಲ್ಲಿ ಬಂದಿರುವ ಈ ಹಾಡು, ಚಿತ್ರದ ಯಾವುದೇ ಸುಳಿವು ನೀಡದೆ ರಹಸ್ಯವನ್ನು ಕಾಯ್ದುಕೊಂಡಿದೆ.

‘ಗೊತ್ತಿಲ್ಲ ಶಿವನೇ’ ಎಂಬ ಪದಗಳಿಂದ ಪ್ರಾರಂಭವಾಗುವ ಈ ಶಿವ ಭಕ್ತಿಗೀತೆ, ಅಭಿಮಾನಿಗಳ ಮನವನ್ನು ಆಳವಾಗಿ ಮುಟ್ಟಿದೆ. ವರಾಹ ರೂಪಂ ಹಾಡಿಗೆ ಸಾಹಿತ್ಯ ಬರೆದ ಶಶಿರಾಜ್ ಕಾವೂರ್ ಈ ಹಾಡಿಗೂ ಸಾಹಿತ್ಯ ರಚನೆ ಮಾಡಿದ್ದಾರೆ. ಭಜನೆಯ ಶೈಲಿಯ ಈ ಗೀತೆಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದು, ಅಬ್ಬಿ ವಿ ಹಿನ್ನೆಲೆ ಗಾಯನ ಮಾಡಿದ್ದಾರೆ.

ಕಾಂತಾರ ಮೊದಲ ಭಾಗದಲ್ಲಿ ವರಾಹ ರೂಪಂ ಹಾಡು ಪ್ರಮುಖ ಪ್ರಾಣವಾಗಿದ್ದರೆ, ಈ ಬಾರಿ ಸಿನಿಮಾ ಬಿಡುಗಡೆಯ ಮುನ್ನವೇ ಪ್ರಮುಖ ಹಾಡನ್ನು ಬಿಡುಗಡೆ ಮಾಡಿರುವುದು ವಿಭಿನ್ನ ಪ್ರಯೋಗವಾಗಿದೆ. ಹಾಡು ಕೇಳಿದ ಪ್ರೇಕ್ಷಕರು ರೋಮಾಂಚನಗೊಂಡು, “ಬ್ರಹ್ಮಕಲಶ ಸಂಗೀತ, ಭಾವನೆ ಮತ್ತು ದರ್ಶನ ಎಲ್ಲವು ದೇವರ ಅನುಭವದಂತಿದೆ. ಇಷ್ಟು ಆಳವಾದ ಸಂಸ್ಕೃತಿ ಮತ್ತು ಭಕ್ತಿ ತೋರಿಸುವುದು ಕೇವಲ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್‌ರಿಂದಲೇ ಸಾಧ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!