ಹೊಸದಿಗಂತ ಡಿಜಿಟಲ್ ಡೆಸ್ಕ್:
2025-26ರ ರಣಜಿ ಟ್ರೋಫಿಯಲ್ಲಿ ಕನ್ನಡಿಗ ಕರುಣ್ ನಾಯರ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗೋವಾ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಬಾರಿಸುವಲ್ಲಿ ಸ್ವಲ್ಪ ಅಂತರದಿಂದ ತಪ್ಪಿಸಿಕೊಂಡಿದ್ದ ಕರುಣ್, ಇದೀಗ ಕೇರಳ ವಿರುದ್ಧ ಅದನ್ನು ಸಾಧಿಸಿ ಮಿಂಚಿದ್ದಾರೆ. ಕರ್ನಾಟಕ ಹಾಗೂ ಕೇರಳ ನಡುವಿನ ಮೂರನೇ ಸುತ್ತಿನ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ 233 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದಾರೆ.
ಮೊದಲ ದಿನದಾಟದಲ್ಲಿ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಕರುಣ್, ಎರಡನೇ ದಿನದಂದು ಅದನ್ನು ದ್ವಿಶತಕವಾಗಿ ಪರಿವರ್ತಿಸಿ ಮಿಂಚಿದರು. ಈ ಮೂಲಕ ತಮ್ಮ ಹಿಂದಿನ ಫಾರ್ಮ್‌ನ್ನು ಮುಂದುವರಿಸಿದ ಕರುಣ್, ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಹಿಂತಿರುಗುವ ಆಸೆ ಹುಟ್ಟಿಸಿಕೊಂಡಿದ್ದಾರೆ. ಪಂದ್ಯ ಆರಂಭದಲ್ಲಿ ಕರ್ನಾಟಕ ಕೇವಲ 13 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಕಷ್ಟಕರ ಪರಿಸ್ಥಿತಿಯಲ್ಲಿ ಕರುಣ್ ಮೈದಾನಕ್ಕಿಳಿದರು. ಆದರೂ ಅವರು ಅದ್ಭುತ ತಾಳ್ಮೆ ಮತ್ತು ತಾಂತ್ರಿಕ ಶ್ರೇಷ್ಠತೆಯೊಂದಿಗೆ ಇನ್ನಿಂಗ್ಸ್ ಕಟ್ಟಿದರು.
ಒಟ್ಟು 389 ಎಸೆತಗಳನ್ನು ಎದುರಿಸಿ 25 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 233 ರನ್ ಬಾರಿಸಿದ ಕರುಣ್, ತಂಡದ ಸ್ಕೋರ್‌ನ್ನು ಸುರಕ್ಷಿತ ಹಂತಕ್ಕೆ ತಲುಪಿಸಿದರು. ಅವರೊಂದಿಗೆ ಸ್ಮರಣ್ ರವಿಚಂದ್ರನ್ 338 ರನ್‌ಗಳ ಭರ್ಜರಿ ಜೊತೆಯಾಟವನ್ನು ಹಂಚಿಕೊಂಡಿದ್ದು, ಸ್ಮರಣ್ ಸಹ ಶತಕ ಬಾರಿಸಿ ಇದೀಗ ದ್ವಿಶತಕದ ಹೊಸ್ತಿಲಿನಲ್ಲಿದ್ದಾರೆ.
ಗಮನಾರ್ಹವಾಗಿ, ಕರುಣ್ ನಾಯರ್ ಹಿಂದಿನ ಗೋವಾ ವಿರುದ್ಧದ ಪಂದ್ಯದಲ್ಲಿ ಅಜೇಯ 174 ರನ್ ಬಾರಿಸಿದ್ದರು ಮತ್ತು ಅದಕ್ಕೂ ಮುನ್ನ ಸುತ್ತಿನ ಮೊದಲ ಪಂದ್ಯದಲ್ಲಿ 73 ರನ್‌ಗಳ ಕಾಣಿಕೆ ನೀಡಿದ್ದರು. ಈ ಸೀಸನ್‌ನಲ್ಲಿ ಅವರು ನಿರಂತರ ಉತ್ತಮ ಫಾರ್ಮ್‌ನಲ್ಲಿದ್ದು, ತಮ್ಮ ಪುನರಾಗಮನದ ದೃಢ ಸಂಕೇತ ನೀಡಿದ್ದಾರೆ.
ಇದಕ್ಕೂ ಮುನ್ನ ಕರುಣ್ ನಾಯರ್ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನದ ರಣಜಿ ಸೀಸನ್‌ನಲ್ಲಿ ಶತಕಗಳ ಮೇಲೆ ಶತಕ ಬಾರಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಸುಮಾರು ಎಂಟು ವರ್ಷಗಳ ನಂತರ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದರೂ, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಅವರು ಕೇವಲ ಒಂದು ಇನ್ನಿಂಗ್ಸ್‌ನಲ್ಲಿ 50 ರನ್‌ಗಳ ಗಡಿಯನ್ನು ದಾಟಿದ್ದರು. ಅದಾದ ನಂತರ ಆಯ್ಕೆದಾರರು ಅವರನ್ನು ತಂಡದಿಂದ ಕೈಬಿಟ್ಟಿದ್ದರು.

                                    