ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಟ ವಿಜಯ್ ನೇತೃತ್ವದ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ ಕನಿಷ್ಠ 39 ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದಲ್ಲಿ ಕಳೆದ ವರ್ಷ ನಡೆದ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜನರು ಸಾವಿನ ಪ್ರಕರಣವನ್ನು ಹೋಲಿಸಿದರೆ, ಕರೂರು ದುರಂತ ಮತ್ತೂ ಭೀಕರವಾಗಿದೆ ಎಂದು ವಿರೋಧ ಪಕ್ಷದ ನಾಯಕರು ಒತ್ತಿ ಹೇಳಿದರು.
ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗಂಗರೊಂದಿಗೆ ಮಾತನಾಡಿ, ಈ ದುರಂತಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ಆರೋಪಿಸಿದರು. ಕಾರ್ಯಕ್ರಮಕ್ಕೆ ನೀಡಲಾದ ಅನುಮತಿ, ಭದ್ರತಾ ವ್ಯವಸ್ಥೆಯ ಕೊರತೆ ಮತ್ತು ಸಮಯೋಚಿತ ಕ್ರಮಗಳ ಕೊರತೆಯ ಕಾರಣದಿಂದ ಜನರ ಸುರಕ್ಷತೆ ಕಾಪಾಡಲಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು.
ಡಿಎಂಕೆ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡು ವಿಜಯ್ ತಲೆಗೆ ಪ್ರಕರಣವನ್ನು ಕಟ್ಟಿದ್ದಾರೆ. ರ‍್ಯಾಲಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ರಾ? ಅಲ್ಲಿನ ಸರ್ಕಾರ ಅನುಮತಿ ನೀಡಿತ್ತಾ? ವಿಜಯ್ ಬಂದು ರ‍್ಯಾಲಿ ನಡೆಸಿದರೂ, ಅವರದ್ದೂ ತಪ್ಪಿದೆ, ಕ್ಷಮೆ ಕೇಳಿಲ್ಲ, ಗಾಯಾಳುಗಳನ್ನು ಭೇಟಿ ಮಾಡಲೂ ಹೋಗಿಲ್ಲ” ಎಂದು ಆರೋಪಿಸಿದ್ದಾರೆ.