Tuesday, November 4, 2025

ಕರೂರು ದುರಂತ | ವಿಜಯ್ ಒಬ್ಬರನ್ನೇ ಆರೋಪಿಸುವುದು ತಪ್ಪು: ತಲಾ ಅಜಿತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರೂರು ಕಾಲ್ತುಳಿತ ಪ್ರಕರಣವು ತಮಿಳುನಾಡಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ದುರ್ಘಟನೆ ರಾಜಕೀಯ ವಲಯದಿಂದ ಹಿಡಿದು ಚಿತ್ರರಂಗದವರೆಗೂ ಚರ್ಚೆಯ ಕೇಂದ್ರವಾಗಿದ್ದು, ನಟ ವಿಜಯ್ ಸ್ಥಾಪಿಸಿದ ಟಿವಿಕೆ ಪಕ್ಷಕ್ಕೂ ದೊಡ್ಡ ಹೊಡೆತವಾಯಿತು. ಇತ್ತೀಚೆಗೆ ಈ ಪ್ರಕರಣದ ಕುರಿತು ಮೊದಲ ಬಾರಿಗೆ ತಮಿಳು ಚಿತ್ರರಂಗದ ಸ್ಟಾರ್ ನಟ ತಲಾ ಅಜಿತ್ ಪ್ರತಿಕ್ರಿಯೆ ನೀಡಿದ್ದು, ಅವರ ಮಾತುಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಅಜಿತ್ ತಮ್ಮ ಸಂದರ್ಶನದಲ್ಲಿ ಕರೂರು ಘಟನೆಯ ಕುರಿತು ಮಾತನಾಡುತ್ತಾ, “ಈ ಘಟನೆಯಲ್ಲಿ ಕೇವಲ ನಟ ವಿಜಯ್ ಅಥವಾ ಅವರ ಟಿವಿಕೆ ಪಕ್ಷವನ್ನೇ ಆರೋಪಿಸುವುದು ಸರಿಯಲ್ಲ. ಇದು ಯಾರೊಬ್ಬರ ತಪ್ಪಲ್ಲ, ಎಲ್ಲರಿಗೂ ಒಂದು ಮಟ್ಟದ ಜವಾಬ್ದಾರಿಯಿದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಅವರು ವಿಜಯ್‌ಯ ಬೆನ್ನಿಗೆ ನಿಂತು ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.

ವಿಜಯ್ ಇತ್ತೀಚೆಗೆ ಸಿನೆಮಾ ಕ್ಷೇತ್ರದಿಂದ ಸಂಪೂರ್ಣವಾಗಿ ದೂರವಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹೊಸ ಪಕ್ಷ ಟಿವಿಕೆ (TVK) ಮೂಲಕ ಜನರ ಸೇವೆಗೆ ಮುಂದಾಗಿರುವ ವಿಜಯ್, ಹಲವಾರು ಭಾರಿ ಮಟ್ಟದ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದ್ದರು. ಇವುಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿದ್ದರು. ಆದರೆ ಕರೂರು ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಹಲವು ಮಂದಿ ಸಾವನ್ನಪ್ಪಿದ ಪರಿಣಾಮ, ವಿಜಯ್ ಅವರ ರಾಜಕೀಯ ಪ್ರಯಾಣದ ಆರಂಭವೇ ಸಂಕಷ್ಟದಲ್ಲಿತ್ತು.

ಅಜಿತ್ ತಮ್ಮ ಹೇಳಿಕೆಯಲ್ಲಿ ಈ ರೀತಿಯ ಘಟನೆಗಳನ್ನು ಕೆಲವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಉಲ್ಲೇಖಿಸಿದ್ದಾರೆ. “ಈ ಸಂದರ್ಭವನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಆದರೆ ಅಸಲಿ ಕಾರಣಗಳನ್ನು ಅರಿಯುವ ಪ್ರಯತ್ನ ಯಾರೂ ಮಾಡುವುದಿಲ್ಲ” ಎಂದು ಅಜಿತ್ ಹೇಳಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಸುಮಾರು 63 ಚಿತ್ರಗಳಲ್ಲಿ ನಟಿಸಿರುವ ಅಜಿತ್, ಇತ್ತೀಚೆಗೆ ಕಾರ್ ರೇಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತನ್ಮಧ್ಯೆ ತಮ್ಮ 64ನೇ ಚಿತ್ರಕ್ಕೂ ಹಸಿರು ನಿಶಾನೆ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಅವರ ಥುನಿವು ಚಿತ್ರದ ಮೊದಲ ದಿನದ ಸಂಭ್ರಮದ ವೇಳೆ ಅಭಿಮಾನಿಯೊಬ್ಬ ಟ್ರಕ್‌ನಿಂದ ಬಿದ್ದು ಸಾವನ್ನಪ್ಪಿದ್ದ ಘಟನೆ ಕೂಡ ನಡೆದಿತ್ತು. ಈ ಸಂದರ್ಭವನ್ನು ನೆನೆಸಿಕೊಂಡ ಅಜಿತ್, “ಇಂತಹ ಘಟನೆಗಳು ಚಿತ್ರೋದ್ಯಮದಲ್ಲಿ ಮಾತ್ರ ಮರುಕಳಿಸುತ್ತವೆ. ಕ್ರಿಕೆಟ್ ಪಂದ್ಯಗಳಲ್ಲಿ ಲಕ್ಷಾಂತರ ಜನ ಸೇರುತ್ತಾರೆ, ಆದರೆ ಅಲ್ಲಿ ಇಂತಹ ಅನಾಹುತಗಳು ಕಡಿಮೆ. ಇದು ನಾವೆಲ್ಲರೂ ಚಿಂತಿಸಬೇಕಾದ ವಿಷಯ” ಎಂದು ಹೇಳಿದ್ದಾರೆ.

error: Content is protected !!