Friday, September 5, 2025

ಖರ್ಗೆಗೆ ಪ್ರಧಾನಿಯಾಗುವ ಯೋಗ ಸಮೀಪಿಸಿದೆ: ಭವಿಷ್ಯ ನುಡಿದ ಬಾಬುರಾವ್‌ ಚಿಂಚನಸೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿಯಾಗುವ ಯೋಗ ಸಮೀಪಿಸುತ್ತಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರು ನಮ್ಮ ಭಾಗದ ದೊಡ್ಡ ನಾಯಕರಾಗಿ, ಪ್ರಧಾನಿಯ ಸಮಾನ ಮಟ್ಟದಲ್ಲಿ ಬೆಳೆದಿದ್ದಾರೆ. ಇಂದು ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಳಿತ ಸ್ಥಾನದಲ್ಲಿ ಖರ್ಗೆಯವರು ಕುಳಿತಿರುವುದು ಗೌರವದ ವಿಷಯ ಎಂದು ಅಭಿಮಾನ ವ್ಯಕ್ತಪಡಿಸಿದರು.

ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬ ಪ್ರತಿಜ್ಞೆಯನ್ನು ಖರ್ಗೆಯವರ ಮುಖಾಂತರ ಪೂರ್ಣಗೊಳಿಸುತ್ತೇನೆ ಎಂದು ಅವರು ಭರವಸೆ ನೀಡಿದರು. ಸೂರ್ಯ-ಚಂದ್ರ ಉದಯಿಸುವುದು ಎಷ್ಟು ಸತ್ಯವೋ, ಖರ್ಗೆಯವರ ಮುಖಾಂತರ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವುದು ಅಷ್ಟೇ ಸತ್ಯ ಎಂದು ಅವರು ಹೇಳಿದರು.

ಎಂಎಲ್ಸಿ ಸ್ಥಾನ ತಪ್ಪಿದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಬಾಗಿಲಿನಿಂದಾಗಲಿ, ಮುಂದಿನ ಬಾಗಿಲಿನಿಂದಾಗಲಿ ತಾವು ಎಂಎಲ್ಸಿ ಆಗುವುದಿಲ್ಲವೆಂದು ಸ್ಪಷ್ಟಪಡಿಸಿದರು. ಚುನಾವಣೆಯ ಯುದ್ಧಭೂಮಿಯಲ್ಲಿ ಜನರಿಂದ ಸೋತಿರುವುದನ್ನು ಒಪ್ಪಿಕೊಂಡ ಅವರು, 2028ರಲ್ಲಿ ಜನರೆದುರು ಮತ್ತೊಮ್ಮೆ ಗೆದ್ದು ಡಿಸಿಎಂ ಆಗಿ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದರು. 25 ವರ್ಷ ಎಂಎಲ್ಎ, 10 ವರ್ಷ ಸಚಿವ ಹಾಗೂ 10 ವರ್ಷ ಕ್ಯಾಬಿನೆಟ್ ಹಿರಿಯತ್ವ ಹೊಂದಿರುವುದನ್ನು ಉಲ್ಲೇಖಿಸಿದ ಅವರು, ಕುಟುಂಬವಿಲ್ಲದ ಕಾರಣ ಸಮಾಜ ಸೇವೆಯೇ ತನ್ನ ಜೀವನದ ಧ್ಯೇಯವೆಂದು ಹೇಳಿದರು.

ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬರುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಯಾವುದೇ ಸಂದರ್ಭದಲ್ಲೂ ಕೆಟ್ಟ ಹೆಸರು ಮಾಡದು, ಈ ವಿಷಯ ಮುಖ್ಯಮಂತ್ರಿ ಗಮನದಲ್ಲಿದ್ದು, ಅವರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ