ಹೊಸದಿಗಂತ ಡಿಜಿಟಲ್ ಡೆಸ್ಕ್;
ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯಲ್ಲಿ 2200 ಕೋ.ರೂ.ಗಳ 52 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸದ ಕಾರ್ಯಕ್ರಮದ ಜೊತೆಯಲ್ಲಿಯೇ ದೇಶದ 9.7ಕೋಟಿ ರೈತರಿಗೆ ಕಿಸಾನ್ ಸಮ್ಮಾನ್‌ನ 20ನೇ ಕಂತನ್ನು ಬಿಡುಗಡೆ ಮಾಡಿದರು. ಈ ಮೊತ್ತ 20,500ಕೋ.ರೂ.ಗಳಾಗಿವೆ.
ಈ ಮೂಲಕ ಸರಕಾರವು ಈ ವರೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ದೇಶದ ರೈತರ ಖಾತೆಗಳಿಗೆ ವರ್ಗಾಯಿಸಿದ ಹಣದ ಮೊತ್ತ 3.75ಲಕ್ಷ ಕೋ.ರೂ.ಗಳಿಗೂ ಅಧಿಕವಾಗಿದೆ ಎಂಬುದನ್ನು ಪ್ರಧಾನಿ ಮೋದಿ ಬೊಟ್ಟು ಮಾಡಿದರು.
ಉತ್ತರಪ್ರದೇಶದ 2.5ಕೋಟಿ ರೈತರಿಗೆ 90 ಸಾವಿರ ಕೋ.ರೂ.ಮತ್ತು ಕಾಶಿಯ ರೈತರಿಗೆ 900 ಕೋ.ರೂ.ಗಳು ಲಭಿಸಿವೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರಕಾರ ಇದೀಗ ಪಿಎಂ ಧನ್ ಧನ್ಯ ಯೋಜನೆಯನ್ನು ರೈತರಿಗಾಗಿ ಆರಂಭಿಸಿದ್ದು, ಈ ಯೋಜನೆಯಡಿ ರೈತರ ಕಲ್ಯಾಣಕ್ಕೆ 24000ಕೋ.ರೂ.ಗಳನ್ನು ವೆಚ್ಚ ಮಾಡಲಿದೆ. ಇದರಡಿ ಸಣ್ಣ ಜಿಲ್ಲೆಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದರು.
ತಮ್ಮ ಸರಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿರುವುದಕ್ಕೆ ಪಿಎಂ ಕಿಸಾನ್ ನಿಧಿಯೇ ಒಂದು ನಿದರ್ಶನ.ರೈತರ ಪ್ರತಿಯೊಂದು ಸಮಸ್ಯೆಗಳನ್ನು ಎತ್ತಿಕೊಂಡು ಕಳೆದೊಂದು ದಶಕದಲ್ಲಿ ಅವನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದೆ.ಆದರೆ ವಿಪಕ್ಷಗಳು ಋಣಾತ್ಮಕವಾಗಿ ವರ್ತಿಸಿ ಸರಕಾರದ ಜನಪರ ಕಾರ್ಯಗಳಿಗೆ ಅಡ್ಡಿ ಒಡ್ಡುತ್ತಿರುವುದಕ್ಕೆ ಅವರು ವಿಷಾದಿಸಿದರು.
ಬೆಳೆ ವಿಮೆ ಯೋಜನೆ ವಿತರಣೆ
ದೇಶದ ರೈತರಿಗೆ ವಿಕಸಿತ್ ಕೃಷಿ ಸಂಕಲ್ಪ್ ಅಭಿಯಾನದ ಬೆಳೆ ವಿಮೆ ಯೋಜನೆಯಡಿ ಈ ವರೆಗೆ 1.75 ಲ.ಕೋ.ರೂ.ಗಳನ್ನು ನೀಡಲಾಗಿದೆ.1.25 ಕೋಟಿ ರೈತರ ಜೊತೆ ಸರಕಾರ ಸಂವಾದ ನಡೆಸಿ ಭೂಮಿಗೆ ಪ್ರಯೋಗಾಲಯದ ಸಂದೇಶ ನೀಡಿದೆ. ಜನತೆ ಹಬ್ಬಗಳ ಸಂದರ್ಭದಲ್ಲಿ ವೋಕಲ್ ಫಾರ್ ಲೋಕಲ್‌ಗೆ ಆದ್ಯತೆ ನೀಡಿ ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಬೇಕೆಂದು ಮನವಿ ಮಾಡಿದರು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತು ನಿಮ್ಮ ಖಾತೆಗೆಬಂದಿದೆಯೇ ಹೀಗೆ ಚೆಕ್ ಮಾಡಿ
– ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಕಂತು ಮೊತ್ತವು ನಿಮ್ಮ ಖಾತೆಗೆ ಜಮಾ ಆಗಿದ್ದರೆ, ಕ್ರೆಡಿಟ್ ಮೆಸೇಜ್ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.
-ರೈತರು ಪಿಎಂ ಕಿಸಾನ್ ಪೋರ್ಟಲ್ ಮೂಲಕ ತಮ್ಮ ಖಾತೆಗೆ ಹಣ ತಲುಪಿದೆಯೇ ಎಂದು ಪರಿಶೀಲಿಸಬಹುದು .
– 20 ನೇ ಕಂತು ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಹೋಗಬೇಕು .
– ಇದರ ನಂತರ, ಫಾರ್ಮರ್ ಕಾರ್ನರ್‌ಗೆ ಹೋಗಿ ಮತ್ತು ಬೆನೆಫಿಶಿಯರಿ ಸ್ಟೇಟಸ್ ಗೆ ಹೋಗಬೇಕು.
– ನೀವು ಬೆನೆಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆಯುತ್ತದೆ.
– ಈ ಪುಟದಲ್ಲಿ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
– ಒಮ್ಮೆ ಈ ಮಾಹಿತಿಯನ್ನು ಭರ್ತಿ ಮಾಡಿದರೆ, 20 ನೇ ಕಂತಿನ ಸ್ಥಿತಿ ನಿಮ್ಮ ಮುಂದೆ ಗೋಚರಿಸುತ್ತದೆ.
– ಇ-ಕೆವೈಸಿ, ಭೂ ಪರಿಶೀಲನೆ ಮತ್ತು ಆಧಾರ್-ಬ್ಯಾಂಕ್ ಸೀಡಿಂಗ್‌ನಲ್ಲಿ ‘ಹೌದು’ ಎಂದು ತೋರಿಸಿದರೆ, ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಅಥವಾ ಈಗಾಗಲೇ ಜಮಾ ಮಾಡಲಾಗಿದೆ ಎಂದರ್ಥ.