ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಹೆಮ್ಮೆ ಎಂದು ಕರೆಯಲ್ಪಡುವ ಕಾವೇರಿ ನದಿಯ ಮೇಲೆ ನಿರ್ಮಿತವಾದ ಕೃಷ್ಣರಾಜ ಸಾಗರ (KRS) ಜಲಾಶಯ ಈ ಬಾರಿ ಹೊಸ ಇತಿಹಾಸವನ್ನು ರಚಿಸಿದೆ. ಪ್ರತಿ ವರ್ಷ ನೀರಿನ ಕೊರತೆ, ವಿವಾದಗಳು ಹಾಗೂ ತಮಿಳುನಾಡಿಗೆ ನೀರು ಬಿಡುಗಡೆ ವಿಷಯದಿಂದ ಸುದ್ದಿಯಾಗುತ್ತಿದ್ದ ಈ ಡ್ಯಾಂ, ಈ ವರ್ಷ ದಾಖಲೆ ಮಟ್ಟದ ಮಳೆಯಿಂದ ಸಂತೋಷದ ಸುದ್ದಿ ತಂದಿದೆ. ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಸಂಪೂರ್ಣ ಭರ್ತಿಯಾದ ಕೆಆರ್‌ಎಸ್ ಈಗ ರಾಜ್ಯದ ಕೃಷಿಕರಿಗೆ ಆಶಾದೀಪವಾಗಿದೆ.
ಜೂನ್ ತಿಂಗಳಲ್ಲಿಯೇ ಭರ್ತಿಯಾದ ಕೆಆರ್‌ಎಸ್ ಡ್ಯಾಂ, ಈಗ ಹಿಂಗಾರು ಮಳೆಯಲ್ಲಿಯೂ ಮತ್ತೆ ಉಕ್ಕಿ ಹರಿಯುವ ಮಟ್ಟಕ್ಕೇರಿದೆ. 124.80 ಅಡಿ ಸಾಮರ್ಥ್ಯವನ್ನು ಮುಟ್ಟಿರುವ ಜಲಾಶಯದಿಂದ ಈಗ ಕಾವೇರಿ ನದಿಗೆ 20,000 ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಜನರು ಮತ್ತು ಪಶುಗಳು ನದಿಗೆ ಇಳಿಯದಂತೆ ಸೂಚಿಸಲಾಗಿದೆ.
ಈ ಬಾರಿ ಹಿಂಗಾರು ಮಳೆಯಿಂದ ಮಂಡ್ಯ ಜಿಲ್ಲೆಯ ಭೂಮಿಗೆ ಹೊಸ ಜೀವ ತುಂಬಿದ್ದು, ರೈತರ ಮುಖದಲ್ಲಿ ಸಂತೋಷ ಮೂಡಿಸಿದೆ. ಕಳೆದ ಕೆಲವು ವರ್ಷಗಳಿಂದ ಕಾಣದ ಈ ದೃಶ್ಯ, ಈ ಬಾರಿ ಕಾವೇರಿ ತೀರದಲ್ಲಿ ಪುನಃ ಕಾಣಿಸಿಕೊಂಡಿದೆ.

