ಹೊಸದಿಗಂತ ರಾಣೇಬೆನ್ನೂರ:
ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕ ಮತ್ತು ನಿರ್ವಾಹಕಿಯ ಪ್ರಾಮಾಣಿಕತೆಯಿಂದಾಗಿ ಕೃಷಿ ಚಟುವಟಿಕೆಗಾಗಿ ಖರೀದಿಸಿದ್ದ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ಕಳೆದುಕೊಂಡಿದ್ದ ರೈತನೋರ್ವನು ಮರಳಿ ಪಡೆದ ಹೃದಯಸ್ಪರ್ಶಿ ಘಟನೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ನೂಕಾಪುರ ಗ್ರಾಮದ ರೈತ ರಾಜು ವಡೆಯರ ಅವರು ತಮ್ಮ ಕೃಷಿ ಕಾರ್ಯಕ್ಕೆ ನೀರು ಹಾಯಿಸಲು ಅಗತ್ಯವಿದ್ದ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ಭಾನುವಾರ ರಾಣೇಬೆನ್ನೂರಿನಲ್ಲಿ ಖರೀದಿಸಿದ್ದರು. ಇವುಗಳನ್ನು ತೆಗೆದುಕೊಂಡು ರಾಣೇಬೆನ್ನೂರಿನಿಂದ ಚೌಡಯ್ಯದಾನಪುರ ಮಾರ್ಗವಾಗಿ ಗುತ್ತಲಕ್ಕೆ ಚಲಿಸುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು.
ದಾರಿ ಮಧ್ಯೆ, ತಮ್ಮ ಗ್ರಾಮವಾದ ನೂಕಾಪುರ ತಲುಪುತ್ತಿದ್ದಂತೆ, ರಾಜು ವಡೆಯರ ಅವರು ತಮ್ಮ ಬಳಿ ಇದ್ದ ಇತರೆ ಲಗೇಜ್‌ಗಳನ್ನು ತೆಗೆದುಕೊಂಡು ಅವಸರದಲ್ಲಿ ಇಳಿದಿದ್ದಾರೆ. ಆದರೆ, ಬಹುಮುಖ್ಯವಾಗಿದ್ದ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಉಪಕರಣಗಳನ್ನು ಬಸ್‌ನಲ್ಲೇ ಮರೆತು ಹೋಗಿದ್ದರು. ಸಂಜೆಯಾಗುತ್ತಿದ್ದಂತೆ ಉಪಕರಣಗಳ ನೆನಪಾಗಿ, ರೈತ ರಾಜು ಅವರು ಆತಂಕದಿಂದ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದರು.
ನಂತರ, ಅವರು ಬಸ್‌ನ ನಿರ್ವಾಹಕಿ ಸಬೀನಾ ಅವರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಕರೆ ಮಾಡಿದ್ದಾರೆ. ಈ ವೇಳೆ, ನಿರ್ವಾಹಕಿ ಸಬೀನಾ ಅವರು ತಕ್ಷಣವೇ ಸ್ಪಂದಿಸಿ, “ಮೋಟಾರ್ ಆಸನದ ಕೆಳಗೆ ಇತ್ತು, ತೆಗೆದಿಟ್ಟುಕೊಂಡಿದ್ದೇವೆ. ಬಂದು ತೆಗೆದುಕೊಂಡು ಹೋಗಿ” ಎಂದು ಹೇಳಿದ್ದಾರೆ. ಇದನ್ನು ಕೇಳಿದ ರೈತ ರಾಜು ವಡೆಯರ ಅವರು ನಿರಾಳರಾದರು.
ಸೋಮವಾರ ಬೆಳಿಗ್ಗೆ, ಚಾಲಕ ಪ್ರಕಾಶ ಹೆಗ್ಗೋಳ ಮತ್ತು ನಿರ್ವಾಹಕಿ ಸಬೀನಾ ಅವರು ಚೌಡಯ್ಯದಾನಪುರ ಗ್ರಾಮದಲ್ಲಿ ಬೆಲೆಬಾಳುವ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ರೈತ ರಾಜು ವಡೆಯರ ಅವರಿಗೆ ಮರಳಿಸಿದರು. ತಮ್ಮ ಕರ್ತವ್ಯದ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಮೆರೆದ ಈ ಇಬ್ಬರು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಗ್ರಾಮಸ್ಥರು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.

