Thursday, September 18, 2025

ವಿದೇಶದಿಂದ ಬರುತ್ತಿದ್ದಂತೆ ದೆಹಲಿ ಏರ್ ಪೋರ್ಟ್ ನಲ್ಲಿ ಲಲಿತ್ ಮೋದಿ ಸಹೋದರ ಅರೆಸ್ಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿದೇಶದಿಂದ ಭಾರತಕ್ಕೆ ಮರಳುತ್ತಿದ್ದಂತೆ ಉದ್ಯಮಿ ಲಲಿತ್ ಮೋದಿ ಸಹೋದರ ಸಮೀರ್ ಮೋದಿ ಅರೆಸ್ಟ್ ಆಗಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಮೀರ್ ಮೋದಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ಸಮೀರ್ ಮೋದಿಯನ್ನು ಬಂಧಿಸಲಾಗಿದೆ. ಮೋದಿ ಎಂಟ್ರಪ್ರೈಸರ್ ಉದ್ಯಮ ಸಾಮ್ರಾಜ್ಯದ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿರುವ ಸಮೀರ್ ಮೋದಿ ಬರೋಬ್ಬರಿ 11,000 ಕೋಟಿ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಸಮೀರ್ ಮೋದಿ ತಂದೆ ಕೆಕೆ ಮೋದಿಯ ಉದ್ಯಮ ಸಾಮ್ರಾಜ್ಯವನ್ನು ಮಕ್ಕಳಾದ ಲಲಿತ್ ಮೋದಿ, ಚಾರು ಮೋದಿ ಹಾಗೂ ಸಮೀರ್ ಮೋದಿ ಮುನ್ನಡೆಸುತ್ತಿದ್ದಾರೆ.

ಸಮೀರ್ ಮೋದಿ ಕಂಪನಿಯ ಹಲವು ನಿರ್ದೇಶಕರ ಜೊತೆ ಸಮನ್ವಯ ಸಾಧಿಸಲು ವಿಫಲರಾಗಿದ್ದರು. ಹಲವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಪೈಕಿ ಸ್ವಂತ ತಾಯಿ ವಿರುದ್ಧವೂ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಕಂಪನಿಯ ಇತರ ನಿರ್ದೇಶಕರ ಸಭೆ ಸೇರಿ ಕಳೆದ ವರ್ಷ ಸಮೀರ್ ಮೋದಿಯನ್ನು ಕಂಪನಿಯ ಬೋರ್ಡ್ ಸದಸ್ಯತ್ವದಿಂದ ವಜಾ ಮಾಡಿದ್ದರು.

ಕಳೆದ ವರ್ಷ ಮೇ ತಿಂಗಳಲ್ಲಿ ಕುಟುಂಬದಲ್ಲಿ ಭಾರಿ ಒಡಕು ಮೂಡಿತ್ತು. ತಾಯಿ ವಿರುದ್ಧ ಕಿತ್ತಾಡಕೊಂಡಿದ್ದ ಸಮೀರ್‌ಗೆ ಸಂಕಷ್ಟ ದಿನಗಳು ಆರಂಭಗೊಂಡಿತ್ತು. ಅನುಮತಿ ಇಲ್ಲದೆ ಬೋರ್ಡ್ ಮೀಟಿಂಗ್‌ ನಡೆಯುತ್ತಿದ್ದಾಗ ಪ್ರವೇಸ ಮಾಡಿದ್ದ ಸಮೀರ್, ಸಭೆಯಲ್ಲಿ ರಂಪಾಟ ಮಾಡಿದ್ದರು. ಇತ್ತ ಕುಟುಂಬ ಜೊತೆಗಿನ ಒಡಕೂ ಕೂಡ ತೀವ್ರ ಸಂಕಷ್ಟ ತಂದಿತ್ತು. ಮೇ31 ರಂದು ಸಮೀರ್ ಮೋದಿ ತಾಯಿ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.

ಕಳೆದ ಹಲವು ತಿಂಗಳಿನಿಂದ ವಿದೇಶದಲ್ಲೇ ಉಳಿದುಕೊಂಡಿದ್ದ ಸಮೀರ್ ಮೋದಿ ದಿಢೀರ್ ದೆಹಲಿಗೆ ಮರಳಿದ್ದಾರೆ. ಸಮೀರ್ ವಿರುದ್ದ ಹಳೇ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಮೀರ್ ಮೋದಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಳೆ (ಸೆ.18) ಸಮೀರ್ ಮೋದಿಯನ್ನು ದೆಹಲಿ ಪೊಲೀಸರು ಮತ್ತೆ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ