ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಹಣ ಬಿಡುಗಡೆ ಮಾಡುತ್ತಿದ್ದರೂ, ರಾಜ್ಯದಲ್ಲಿ ಯೋಜನೆಗಳ ಪ್ರಗತಿ ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಕಾರಣ ಒಂದೇ ಭೂಸ್ವಾಧೀನ ಸಮಸ್ಯೆ. ರಾಜ್ಯ ಸರ್ಕಾರದಿಂದ ಭೂಮಿ ಹಸ್ತಾಂತರದಲ್ಲಿ ಉಂಟಾಗುತ್ತಿರುವ ವಿಳಂಬವೇ ಹಲವು ಪ್ರಮುಖ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ನೀಡಿದ ಮಾಹಿತಿಯ ಪ್ರಕಾರ, ಕರ್ನಾಟಕದ ವಿವಿಧ ಹೊಸ ರೈಲ್ವೆ ಮಾರ್ಗಗಳಿಗೆ ಒಟ್ಟು 9,020 ಹೆಕ್ಟೇರ್ ಭೂಮಿ ಅಗತ್ಯವಿದೆ. ಆದರೆ ಇದರಲ್ಲಿ ಕೇವಲ 5,679 ಹೆಕ್ಟೇರ್ ಮಾತ್ರ ಸ್ವಾಧೀನವಾಗಿದೆ. ಉಳಿದ 3,341 ಹೆಕ್ಟೇರ್ ಭೂಮಿಯನ್ನು ರಾಜ್ಯ ಇನ್ನೂ ಹಸ್ತಾಂತರಿಸದಿರುವುದರಿಂದ ಅನೇಕ ಯೋಜನೆಗಳು ಕಾಗದದಲ್ಲಿ ಮಾತ್ರ ಉಳಿದುಕೊಂಡಿವೆ.
ಧಾರವಾಡ–ಬೆಳಗಾವಿ ಮೂಲಕ ಕಿತ್ತೂರು ಹೊಸ ರೈಲು ಮಾರ್ಗ, ಶಿವಮೊಗ್ಗ–ರಾಣೆಬೆನ್ನೂರು, ಶಿವಮೊಗ್ಗ–ಹರಿಹರ, ಬೆಳಗಾವಿ–ಧಾರವಾಡ, ವೈಟ್ಫೀಲ್ಡ್–ಕೋಲಾರ ಮತ್ತು ಹಾಸನ–ಬೇಲೂರು ಮಾರ್ಗಗಳಲ್ಲೂ ಇದೇ ಬಿಕ್ಕಟ್ಟು ಎದುರಾಗುತ್ತಿದೆ. ಭೂಮಿ ಸಿಗದೇ ಇರುವುದರಿಂದ ಸಮೀಕ್ಷೆ, ಟೆಂಡರ್, ನಿರ್ಮಾಣ ಸೇರಿದಂತೆ ಎಲ್ಲ ಹಂತಗಳೂ ನಿಂತಿವೆ.
ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಸಹಕಾರ ಅತ್ಯಂತ ಅಗತ್ಯ. ಕೇಂದ್ರದಿಂದ ಅನುದಾನದ ನೀಡಿದ್ದರೂ, ನೆಲದ ಮಟ್ಟದ ಅಡಚಣೆಗಳು ಪ್ರಗತಿಯನ್ನು ತಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಕೇಂದ್ರದ ಪ್ರಕಾರ, 2009–14ರಲ್ಲಿ ರಾಜ್ಯದ ರೈಲ್ವೆ ಯೋಜನೆಗಳ ವಾರ್ಷಿಕ ವೆಚ್ಚ 835 ಕೋಟಿ ರೂ. ಇದ್ದರೆ, 2025–26ರಲ್ಲಿ ಇದು 7,564 ಕೋಟಿ ರೂ.ಗಳಿಗೆ ಏರಲಿದೆ. ಆದರೂ, ಭೂಸ್ವಾಧೀನ ಸಮಸ್ಯೆ ಬಗೆಹರಿಯದಿದ್ದರೆ ಈ ಯೋಜನೆಗಳ ಫಲ ಸಾರ್ವಜನಿಕರಿಗೆ ತಲುಪುವುದು ಮುಂದೂಡಲ್ಪಡುವುದು ನಿಶ್ಚಿತ ಎಂದರು.

