Monday, September 1, 2025

ಜಮೀನು ಒತ್ತುವರಿ ಗಲಾಟೆ: ನಾಲ್ಕು ಮಂದಿಯ ಮೇಲೆ ಹಲ್ಲೆ, ಗಂಭೀರ ಗಾಯ

ಹೊಸದಿಗಂತ ವರದಿ ಹಾಸನ :

ಜಮೀನು ಒತ್ತುವರಿ ವಿಚಾರವಾಗಿ ಮಾತಿನ ಚಕಮಕಿನಿಯಿಂದ ಶುರುವಾದ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆದಿರುವ ಘಟನೆ ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಮಾದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾದಿಹಳ್ಳಿ ಗ್ರಾಮದ ಕುಮಾರಿ, ರವಿ, ಸುಶೀಲಮ್ಮ, ಜೀವನ್ ಹಲ್ಲೆಗೊಳಗಾದ ವ್ಯಕ್ತಿಗಳು. ನಾಲ್ಕು ಜನ ಗಾಯಾಳುಗಳು ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದವರು ಮೋಹನ್ , ಶಿವಣ್ಣ, ಧರ್ಮ, ಸುಶ್ಮಿತಾ, ಕಮಲಿ,ವಿನಯ್ ಒಟ್ಟು ಆರು ಜನ ಸೇರಿ ಮಚ್ಚು ಮತ್ತು ರಾಡ್ ನಿಂದಾ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪ ಮಾಡಿದ್ದಾರೆ.

ಹಲ್ಲೆ ಕುರಿತು ಗಾಯಾಳು ರವಿ ಮಾತನಾಡಿ, ಸುಖಾಸುಮ್ಮನೆ ಜಾಗದ ವಿಚಾರವಾಗಿ ಕಳೆದ ಒಂದು ವರ್ಷದಿಂದ ಮಾತಿನ ಚಕಮಕಿ ನಡೆಯುತಿತ್ತು, ಆದರೆ ಭಾನುವಾರ ಇದೇ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಮಚ್ಚು ರಾಡ್ ನಿಂದ ನಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಘಟನೆ ವಿವರ: ಮಾದಿಹಳ್ಳಿ ಗ್ರಾಮದ ನಿವಾಸಿ ಕುಮಾರಿ ಮತ್ತು ಶಿವಣ್ಣ ಎಂಬುವವರ ಎರಡು ಕುಟುಂಬದ ನಡುವೆ ಕಳೆದ ಒಂದು ವರ್ಷದಿಂದ ಎರಡು ಮನೆಯ ಪಕ್ಕದಲ್ಲಿರುವ ಜಾಗದ ಒತ್ತುವರಿ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇತ್ತು. ಆಗಸ್ಟ್ 31 ರಂದು ಕೂಡ ಜಾಗದ ವಿಚಾರಕ್ಕೆ ಮಾತಿನ ಚಕಮಕಿ ಉಂಟಾಗಿದೆ. ನಂತರ ಮಚ್ಚು ದೊಣ್ಣೆ ರಾಡ್ ಗಳಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಡಿದೆ. ಇದರಲ್ಲಿ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆದಿದ್ದು ಮೂವರಿಗೆ ಗಂಭೀರ ಗಾಯಗಳಾಗಿದೆ.

ಹಳೇಬೀಡು ಪೊಲೀಸ್ ಠಾಣೆಯ ನಿರ್ಲಕ್ಷ : ಈ ಜಮೀನು ವಿಚಾರವಾಗಿ ಆಗಸ್ಟ್ 31 ರಂದು ಬೆಳಗ್ಗೆ ಎರಡು ಮನೆಯವರ ನಡುವೆ ಉಂಟಾದ ಮಾತಿನ ಚಕಮಕಿ ನಡೆದ ಕೂಡಲೇ ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ರಾಜಿ ಸಂಧಾನ ಮಾಡಿಕೊಳ್ಳಿ ಎಂದು ಹೇಳಿಕಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ವಾಪಾಸ್ ಮನೆಗೆ ಬಂದ ನಂತರ ಸಂಜೆ ವೇಳೆ ಮತ್ತೆ ಮಚ್ಚು ರಾಡ್ ನಿಂದ ಹಲ್ಲೆ ನಡೆಸುವ ಹಂತಕ್ಕೆ ಗಲಾಟೆ ನಡೆದಿದೆ. ಇದಕ್ಕೆ ಹಳೇಬೀಡು ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಹಲ್ಲೆಗೊಳಗಾದ ಕುಟುಂಬಸ್ಥರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಗಂಭೀರ ಗಾಯಗೊಂಡಿರುವ ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಲ್ಲೆಗೊಳಗಾದವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ