ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಹುಲಿಕಲ್ ಘಾಟ್ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಅವರು, ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟ್ ಸರಪಳಿ 42.10 ರಿಂದ 42.20 ರಲ್ಲಿನ ಹೇರ್ ಪಿನ್ ತಿರುವಿನಲ್ಲಿ ಮೇ ಅಂತ್ಯದಲ್ಲಿ ಬಿದ್ದಂತಹ ಮಳೆಯಿಂದ ಕಾಂಕ್ರಿಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಪ್ರಸ್ತುತ ಮಣ್ಣು ಕುಸಿತವಾಗಿರುವ ಭಾಗದಲ್ಲಿ ತಾತ್ಕಾಲಿಕವಾಗಿ ದುರಸ್ಥಿ ಕಾರ್ಯ ಕೈಗೊಂಡಿರುವುದಾಗಿ, ಮತ್ತೆ ಮಳೆ ಚುರುಕುಗೊಂಡಿರುವುದರಿಂದ ಮಣ್ಣು ಮತ್ತೆ ಕುಸಿಯುವ ಸಂಭವವಿರುವುದರಿಂದ, ಸುರಕ್ಷತಾ ದೃಷ್ಠಿಯಿಂದ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟಿ ಮಾರ್ಗ ವ್ಯಾಪ್ತಿಯಲ್ಲಿ (ಮಾಸ್ತಿಕಟ್ಟೆಯಿಂದ ಹೊಸಂಗಡಿಯವರೆಗೆ) ತಾತ್ಕಾಲಿಕವಾಗಿ ಮಳೆಗಾಲದವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಗೊಳಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಿದ್ದಾರೆ.