ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ದೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಯಾವುದೇ ಜಾತಿ – ಧರ್ಮಗಳನ್ನು ಸರ್ಕಾರ ಪರಿಗಣಿಸದೇ ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವುದೇ ಬಿಜೆಪಿಯ ಉದ್ದೇಶ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ಚಲೋ ಎಂಬ ಕಾರ್ಯಕ್ರಮ ಮಾಡಿದರು. ಆದರೆ, ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ ಎಂದರು.
ಬಿಜೆಪಿಯವರು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದಾಗಿ ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಕೇಂದ್ರದಲ್ಲಿ ರೈತ ಚಳವಳಿಯಲ್ಲಿ ಅನೇಕ ರೈತರು ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಬಿಜೆಪಿಯವರು ಎಲ್ಲಿದ್ದರು.? ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಯಾವುದೇ ಬಿಜೆಪಿಗರು ಧ್ವನಿ ಎತ್ತಲಿಲ್ಲ ಏಕೆ ಎಂದು ಮರುಪ್ರಶ್ನಿಸಿದರು. ಮಣಿಪುರದಲ್ಲಿ ತೀವ್ರ ಹಿಂಸಾಚಾರ ನಡೆದರೂ, ಪ್ರಧಾನಿ ಮೋದಿ ಅವರು ಅಲ್ಲಿಗೆ ಯಾಕೆ ಭೇಟಿ ನೀಡಲಿಲ್ಲ ಎಂದು ಕೇಳಿದರು.