ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾಂಡೇಲಿ ತಾಲೂಕಿನ ಅರಣ್ಯ ಪ್ರದೇಶದಂಚಿನಲ್ಲಿ ವನ್ಯಜೀವಿಗಳ ಓಡಾಟವು ಇದೀಗ ಮತ್ತೊಮ್ಮೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಗುರುವಾರ ನಸುಕಿನ ವೇಳೆಯಲ್ಲಿ ಅಂಬೇವಾಡಿ ಗ್ರಾಮದ ಮೌಳಂಗಿ ಕ್ರಾಸ್ ಸಮೀಪ ಚಿರತೆಯೊಂದು ಪ್ರತ್ಯಕ್ಷವಾದ ಘಟನೆ ವರದಿಯಾಗಿದೆ.
ಬರ್ಚಿ ರಸ್ತೆಯಿಂದ ಮೌಳಂಗಿಯ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗವಾಗಿ ಚಲಿಸುತ್ತಿದ್ದ ಚಿರತೆಯನ್ನು ಅದೇ ಸಮಯದಲ್ಲಿ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರು ಗಮನಿಸಿದ್ದಾರೆ. ವನ್ಯಜೀವಿಯ ದಿಢೀರ್ ಪ್ರತ್ಯಕ್ಷದಿಂದಾಗಿ ಜನರು ಆತಂಕಗೊಂಡಿದ್ದಾರೆ.
ಅಂಬೇವಾಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳು ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ, ಈ ಪ್ರದೇಶದ ನಿವಾಸಿಗಳು ತೀರಾ ಅಗತ್ಯವಿದ್ದಲ್ಲಿ ಮಾತ್ರ ಹೊರಗೆ ಸಂಚರಿಸುವುದು ಮತ್ತು ಸಂಜೆಯ ನಂತರ ಏಕಾಂಗಿ ಓಡಾಟದಿಂದ ದೂರವಿರುವುದು ಸೂಕ್ತ ಎಂದು ತಿಳಿಸಲಾಗಿದೆ.
ಅರಣ್ಯ ಇಲಾಖೆಯು ಈ ಪ್ರದೇಶದಲ್ಲಿ ಗಸ್ತು ತಿರುಗುವ ಮೂಲಕ ಚಿರತೆಯ ಚಲನವಲನಗಳನ್ನು ಗಮನಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

