Thursday, December 25, 2025

ಬದುಕೋಣ.. ಬದುಕಲು ಬಿಡೋಣ: ಸಮಾಧಾನದ ಮಂತ್ರ ಪಠಿಸಿದ ಕರುನಾಡ ಚಕ್ರವರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಈಗ ಬಿಗ್ ಸ್ಟಾರ್‌ ಸಿನಿಮಾಗಳ ಸಂಭ್ರಮದ ನಡುವೆಯೇ ಅಭಿಮಾನಿಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ದರ್ಶನ್ ನಟನೆಯ ‘ದಿ ಡೆವಿಲ್’ ಮತ್ತು ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರಗಳು ಅಲ್ಪ ಅವಧಿಯ ಅಂತರದಲ್ಲಿ ತೆರೆಕಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ನಟರ ಅಭಿಮಾನಿಗಳು ಪರಸ್ಪರ ಕಿತ್ತಾಟಕ್ಕೆ ಇಳಿದಿದ್ದಾರೆ.

ಇದೇ ಹೊತ್ತಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘45’ ಸಿನಿಮಾ ಕೂಡ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ಚಿತ್ರರಂಗದಲ್ಲಿ ನಡೆಯುತ್ತಿರುವ ಈ ‘ಫ್ಯಾನ್ಸ್ ವಾರ್’ ಕುರಿತು ಬೇಸರ ವ್ಯಕ್ತಪಡಿಸಿದರು.

“ನಾವೆಲ್ಲರೂ ಈ ಸಮಾಜದ ಭಾಗ. ಇಲ್ಲಿ ಎಷ್ಟು ದಿನ ಇರುತ್ತೇವೋ ಅಷ್ಟು ದಿನ ಪ್ರೀತಿಯಿಂದ ಇರಬೇಕು. ಯಾರ ಮನೆಯನ್ನೂ ಒಡೆಯುವ ಕೆಲಸಕ್ಕೆ ಕೈ ಹಾಕಬಾರದು ಅಥವಾ ಯಾರ ಭಾವನೆಗಳ ಜೊತೆಗೂ ಆಟವಾಡಬಾರದು,” ಎಂದು ಕಟ್ಟುನಿಟ್ಟಾಗಿ ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕೇ ಹೊರತು ಬೆಂಕಿ ಹಚ್ಚಬಾರದು. ‘ಬದುಕೋಣ ಮತ್ತು ಬದುಕಲು ಬಿಡೋಣ’ ಎನ್ನುವ ತತ್ವ ಪ್ರತಿಯೊಬ್ಬರಲ್ಲೂ ಇರಲಿ. ಅನ್ಯೋನ್ಯವಾಗಿರುವುದೇ ಜೀವನದ ಸಾರ್ಥಕತೆ,” ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು.

error: Content is protected !!