ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಹೌಸ್‌ಗೆ ಇದೀಗ ಸಂಕಷ್ಟ ಎದುರಾಗಿದ್ದು, ಕೆಲವೇ ಹೊತ್ತಿನಲ್ಲಿ ಬಿಗ್ ಬಾಸ್ ಹೌಸ್ ಗೆ ಬೀಗ ಮುದ್ರೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರು ದಕ್ಷಿಣ ಜಿಲ್ಲಾಡಳಿತದ ಅಧಿಕಾರಿಗಳು ಸ್ಟುಡಿಯೋಸ್ ಬಳಿ ದೌಡಾಯಿಸುತ್ತಿದ್ದು, ವೇಲ್ಸ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಬಿಗಮುದ್ರೆ ಬೀಳಲಿದೆ ಎನ್ನಲಾಗುತ್ತಿದೆ.
ಇತ್ತ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ರಾಮನಗರ ಜಿಲ್ಲೆ ಬಿಡದಿ ಬಳಿಯಿರುವ ವೆಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ ಟೈನ್ಮೆಂಟ್ ಪ್ರೈ. ಲಿ. (ಜಾಲಿ ವುಡ್ ಸ್ಟುಡಿಯೋ)ಗೆ ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ತಿಳಿಸಿದ್ದಾರೆ.
ಇಲ್ಲಿ ಎಸ್.ಟಿ.ಪಿ. ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತಾಜ್ಯ ವಿಲೇವಾರಿ ಆಗುತ್ತಿಲ್ಲ, ಜನರೇಟರ್ ಸೆಟ್ ಗಳಿದ್ದು ಅದಕ್ಕೂ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ ಮಂಡಳಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಶೋಗೆ ಅನುಮತಿ ಪಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದ ಶೋ ನಡೆಸಬೇಕು. ಹೊರಗೆ ಶೂಟಿಂಗ್ ವೇಳೆ ಇಲಾಖೆಯಿಂದ NOC ಪಡೆಯಬೇಕು. ಆದರೆ ಒಳಾಂಗಣ ಶೋ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪರವಾನಿಗೆ ಪಡೆದಿಲ್ಲ. ಏನಾದರೂ ಅವಘಡ ಆದರೆ ಸಂಬಂಧಪಟ್ಟವರೆ ವಿರುದ್ಧ ಕ್ರಮ ಆಗುತ್ತದೆ ಎಂದು ಪ್ರತಿಕ್ರಿಯಿಸಿದರು.