Thursday, December 11, 2025

6 ಸಾವಿರ ಲಂಚ ಪಡೆಯುತ್ತಿದ್ದ ಕಿರಿಯ ಎಂಜಿನಿಯರ್ ಲೋಕಾಯುಕ್ತ ಬಲೆಗೆ

ಹೊಸದಿಗಂತ ವರದಿ,ವಿಜಯಪುರ:

6 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯ ಕಿರಿಯ ಎಂಜಿನಿಯರ್ ವಿಷ್ಣು ಪೋಳ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬುಧವಾರ ನಡೆದಿದೆ.

ಇಲ್ಲಿನ ಕಿರಿಯ ಎಂಜಿನಿಯರ್ ವಿಷ್ಣು ಪೋಳ, ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ 2023-24ನೇ ಸಾಲಿನ ಅನುದಾನದಲ್ಲಿ ವಿಜಯಪುರ ತಾಲೂಕಿನ ಕತಕನಹಳ್ಳಿ ಗ್ರಾಮದ ಮರಗಮ್ಮ ದೇವಸ್ಥಾನ ಬಳಿ ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಬಿಲ್ ಮಂಜೂರಾತಿಗಾಗಿ ಕಾಮಗಾರಿಯ ದಾಖಲಾತಿಗಳಿಗೆ ಸಹಿ ಮಾಡಿ ಕೊಡಲು 6 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿ ಲಂಚದ ಹಣ ಪಡೆಯುತ್ತಿದ್ದಾಗ ಆತನನ್ನು ಬಂಧಿಸಿ, ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿದೆ.

error: Content is protected !!