Friday, December 26, 2025

ಮೆಕ್ಕೆಜೋಳ ಖರೀದಿ ವಿವಾದ: ಸಂಧಾನ ಸಭೆ ವಿಫಲ, ಡಿ.8ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್!

ಹೊಸದಿಗಂತ ಹಾವೇರಿ:

ಪ್ರತಿ ತಾಲೂಕಿಗೆ ಒಂದರಂತೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ, ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟಲ್‌ ಮೆಕ್ಕೆಜೋಳ ಖರೀದಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿ.8ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಮುಂದಾಗಿದ್ದ ರೈತ ನಾಯಕರು ಮತ್ತು ಜಿಲ್ಲೆಯ ಶಾಸಕರ ನಡುವೆ ಶುಕ್ರವಾರ ಸಂಜೆ ನಡೆದ ಸಂಧಾನ ಸಭೆ ಯಾವುದೇ ಫಲಿತಾಂಶ ನೀಡದೇ ವಿಫಲವಾಗಿದೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಮತ್ತು ಯು.ಬಿ. ಬಣಕಾರ ಅವರು ರೈತ ಮುಖಂಡರ ಮನವೊಲಿಸಲು ಪ್ರಯತ್ನಿಸಿದರು. ಡಿಸಿ ವಿಜಯಮಹಾಂತೇಶ ದಾನಮ್ಮನವರ ಮತ್ತು ಎಸ್ಪಿ ಯಶೋದಾ ವಂಟಗೋಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ, ಸರ್ಕಾರವು ಈಗಾಗಲೇ ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳ ಖರೀದಿಸಲು ಆದೇಶ ನೀಡಿದೆ. ಸರ್ಕಾರವು ರೈತರ ಪರವಾಗಿದೆ. ಆದ್ದರಿಂದ ಹೋರಾಟ ಕೈಬಿಡುವಂತೆ ಶಾಸಕರು ಮನವಿ ಮಾಡಿದರು.

ಪ್ರತಿ ತಾಲೂಕಿಗೆ ಒಂದು ಖರೀದಿ ಕೇಂದ್ರ ತೆರೆಯಬೇಕು.

ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟಲ್‌ ಮೆಕ್ಕೆಜೋಳ ಖರೀದಿಸಬೇಕು.

ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು.

ಈ ಮೂರು ಬೇಡಿಕೆಗಳು ಈಡೇರದ ಹೊರತು ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ದೃಢವಾಗಿ ಒತ್ತಾಯಿಸಿದರು.

ರೈತರ ಬೇಡಿಕೆಗಳಿಗೆ ಸ್ಪಂದಿಸಿದ ಶಾಸಕರು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಆದರೆ, ಈ ಭರವಸೆಗೆ ಒಪ್ಪದ ರೈತ ಮುಖಂಡರು ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದರು.

ಈ ಸಂಬಂಧ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೆರ ಮಾತನಾಡಿ, “ಸಂಧಾನ ವಿಫಲವಾಗಿದ್ದು, ನಾವು ಘೋಷಿಸಿದಂತೆ ಡಿ.8ರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ” ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮರಿಗೌಡ ಪಾಟಿಲ, ಮಾಲತೇಶ ಪೂಜಾರ, ಶಿವಯೋಗಿ ಹೊಸಗೌಡ್ರ, ಎಚ್.ಎಚ್. ಮುಲ್ಲಾ, ರಾಜು ತರ್ಲಗಟ್ಟ, ಸುರೇಶ ಮೈದೂರ, ಚನ್ನಪ್ಪ ಮರಡೂರ, ಮುತ್ತಪ್ಪ ಗುಡಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!