ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರದ ಕೋಟೆಪುರದ ಮೀನಿನ ಆಹಾರ ತಯಾರಿಕ ಸಂಸ್ಕರಣಾ ಘಟಕ(ಗೋದಾಮು)ದಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು , ಗೋದಾಮು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಹೆಚ್.ಕೆ.ಖಾದರ್ ಎಂಬವರಿಗೆ ಸೇರಿದ ಎಂಎಂಪಿ ಫಿಶ್ ಮೀಲ್ ಫ್ಯಾಕ್ಟರಿ ಗೋದಾಮಿನಲ್ಲಿ ಬೆಂಕಿ ಅವಘಢ ನಡೆದಿದೆ. ಸಂಜೆ ವೇಳೆ ಗೋದಾಮಿನ ಒಳಗಡೆ ಕಾಣಿಸಿಕೊಂಡ ಬೆಂಕಿ ಏಕಾ ಏಕಿ ವ್ಯಾಪಿಸಿದೆ. ಬೆಂಕಿಯ ಕೆನ್ನಾಲೆ ಗೋದಾಮಿನ ಹೊರಕ್ಕೂ ವ್ಯಾಪಿಸಿದ್ದು ಸಮೀಪದ ಫಿಶ್ ಮೀಲ್ ಫ್ಯಾಕ್ಟರಿಯ ಬಾಯ್ಲರ್ಗೆ ತಗಲುವಷ್ಟರಲ್ಲಿ ಸಮಯ ಪ್ರಜ್ನೆ ಮೆರೆದ ಸ್ಥಳೀಯರು ನೀರು ಎರಚಿ ಬೆಂಕಿಯ ಕೆನ್ನಾಲಿಗೆಯನ್ನ ತಹಬದಿಗೆ ತಂದಿದ್ದಾರೆ.
ಬಾಯ್ಲರ್ಗೆ ಬೆಂಕಿ ತಗುಲಿದರೆ ಅದು ಸ್ಫೋಟಗೊಂಡು ಸ್ಥಳೀಯ ನಿವಾಸಿಗಳ ಮಾರಣಹೋಮವೇ ನಡೆಯುತ್ತಿತ್ತೆಂದು ಸ್ಥಳೀಯರು ದೂರಿದ್ದಾರೆ. ತುಂಬಾ ಹೊತ್ತಿನ ಬಳಿಕ ಮಂಗಳೂರಿನಿಂದ ಅಗ್ನಿ ಶಾಮಕ ದಳದ ವಾಹನ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ.