ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದಲ್ಲಿ ‘ಸು ಫ್ರಮ್ ಸೋ’ ಮೂಲಕ ದೊಡ್ಡ ಯಶಸ್ಸು ಕಂಡಿರುವ ರಾಜ್ ಬಿ. ಶೆಟ್ಟಿ, ಈಗ ಮಲಯಾಳಂ ಸಿನಿಮಾ ಲೋಕಃ ಅನ್ನು ಕರ್ನಾಟಕದಲ್ಲಿ ಹಂಚಿಕೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್ 28ರಂದು ಬಿಡುಗಡೆಯಾದ ಈ ಚಿತ್ರವು ಕೇವಲ ಎರಡು ದಿನಗಳಲ್ಲೇ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದ್ದು, ಬುಕ್ ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿ 9.5 ರೇಟಿಂಗ್ ಪಡೆದುಕೊಂಡಿದೆ. ಈಗಾಗಲೇ 13.5 ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಈ ಚಿತ್ರಕ್ಕೆ ರೇಟಿಂಗ್ ನೀಡಿದ್ದಾರೆ.
ಈ ಸಿನಿಮಾದಲ್ಲಿ ಹೃದಯಂ ಖ್ಯಾತಿಯ ಕಲ್ಯಾಣಿ ಪ್ರಿಯದರ್ಶನ್ ಹಾಗೂ ಪ್ರೇಮಲು ಮೂಲಕ ಜನಪ್ರಿಯತೆ ಪಡೆದ ನಸ್ಲೆನ್ ನಟಿಸಿದ್ದಾರೆ. ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ನಿರ್ಮಿಸಿರುವ ಈ ಚಿತ್ರವನ್ನು ಡಾಮಿನಿಕ್ ಅರುಣ್ ನಿರ್ದೇಶನ ಮಾಡಿದ್ದಾರೆ. ಫ್ಯಾಂಟಸಿ ಹಾಗೂ ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಶನಿವಾರ ಮತ್ತು ಭಾನುವಾರ ವಿಶೇಷವಾಗಿ ಎಲ್ಲೆಡೆ ಹೌಸ್‌ಫುಲ್ ಶೋಗಳು ನಡೆಯಲಿದ್ದು, ಸಿನಿಮಾ ಈಗಾಗಲೇ 6.45 ಕೋಟಿ ರೂಪಾಯಿ ಗಳಿಸಿದೆ.
ಗಮನಾರ್ಹವಾಗಿ, ಈ ಮೊದಲು ಕನ್ನಡದ ಸು ಫ್ರಮ್ ಸೋ ಚಿತ್ರವನ್ನು ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಅವರ ಸಂಸ್ಥೆ ಹಂಚಿಕೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ರಾಜ್ ಬಿ. ಶೆಟ್ಟಿ, ಲೋಕಃ ಚಿತ್ರವನ್ನು ಕರ್ನಾಟಕದಲ್ಲಿ ಹಂಚಿಕೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಪ್ರಸ್ತುತ ಸಿನಿಮಾ ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದು, ಕನ್ನಡದಲ್ಲಿಯೂ ಬಿಡುಗಡೆಯಾಗಬೇಕೆಂಬ ಬೇಡಿಕೆ ಪ್ರೇಕ್ಷಕರಿಂದ ಕೇಳಿಬರುತ್ತಿದೆ.
ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆಯಿಂದ ಬಂದಿರುವ ಏಳನೇ ಸಿನಿಮಾ ಇದಾಗಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಪ್ರಯತ್ನವನ್ನು ಅವರು ಮುಂದುವರೆಸುತ್ತಿದ್ದಾರೆ. ನಿರ್ದೇಶಕ ಡಾಮಿನಿಕ್ ಅರುಣ್ 2017ರಲ್ಲಿ ತರಂಗಂ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದರು.