ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿ, ಯಶಸ್ವಿಯಾಗಿ ಪೇಸ್‌ಮೇಕರ್ ಅಳವಡಿಸಿಕೊಂಡ ಬಳಿಕ ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದರು. ಪ್ರಸ್ತುತ ಅವರು ಆರೋಗ್ಯವಾಗಿದ್ದು, ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ತಮ್ಮ ರಾಜಕೀಯ ಕರ್ತವ್ಯಗಳನ್ನು ಪುನರಾರಂಭಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.
ಮಂಗಳವಾರ ರಾತ್ರಿ ಉಸಿರಾಟದ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಖರ್ಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯ ಮೇರೆಗೆ ಪೇಸ್‌ಮೇಕರ್ ಅಳವಡಿಸಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ. ನನ್ನ ಆರೋಗ್ಯಕ್ಕಾಗಿ ಹಾರೈಕೆ ಸಲ್ಲಿಸಿದ ಎಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಶೀಘ್ರದಲ್ಲೇ ನನ್ನ ಚಟುವಟಿಕೆಗಳನ್ನು ಪ್ರಾರಂಭಿಸುತ್ತೇನೆ ಎಂದು ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
ಅವರ ಪುತ್ರ ಹಾಗೂ ಕರ್ನಾಟಕ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಅಪ್ಪನ ಆರೋಗ್ಯ ಸ್ಥಿರವಾಗಿದೆ. ಕೆಲದಿನಗಳ ವಿಶ್ರಾಂತಿಯ ಬಳಿಕ ಅವರು ಚಟುವಟಿಕೆಗಳಿಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದರು. ಖರ್ಗೆ ಅವರ ಅನಾರೋಗ್ಯದ ವಿಚಾರ ತಿಳಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಕೇಂದ್ರ ನಾಯಕರು ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.