Saturday, September 27, 2025

ಕಪಿಲ್ ಶರ್ಮಾಗೆ ಬೆದರಿಕೆಯೊಡ್ಡಿ 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟದ್ದ ವ್ಯಕ್ತಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಸ್ಯನಟ ಕಪಿಲ್ ಶರ್ಮಾಗೆ ಬೆದರಿಕೆಯೊಡ್ಡಿ 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ವ್ಯಕ್ತಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ನಿವಾಸಿ ದಿಲೀಪ್ ಚೌಧರಿ ಬಂಧಿತ ಆರೋಪಿ. ದರೋಡೆಕೋರ ರೋಹಿತ್ ಗೋದಾರ ಹಾಗೂ ಗೋಲ್ಡಿ ಬ್ರಾರ್ ಹೆಸರುಗಳನ್ನು ಬಳಸಿಕೊಂಡು ಕಪಿಲ್ ಶರ್ಮಾಗೆ 1 ಕೋಟಿ ರೂಪಾಯಿ ನೀಡುವಂತೆ ಬೆದರಿಸಿದ್ದ. ಕಪಿಲ್ ಶರ್ಮಾ ದೂರಿನನ್ವಯ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಆರೋಪಿಯನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ.

ಆರೋಪಿಯು ಸೆ.22 ಹಾಗೂ 23 ರಂದು ಕಪಿಲ್ ಶರ್ಮಾ ಆಪ್ತ ಸಹಾಯಕನಿಗೆ ಕರೆ ಮಾಡಿದ್ದ. ನಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಗೋದಾರ ಹಾಗೂ ಗೋಲ್ಡಿ ಬ್ರಾರ್‌ ಕಡೆಯವನು ಎಂದು ಹೇಳಿಕೊಂಡಿದ್ದ. 1 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದ. ಜೊತೆಗೆ ಕಪಿಲ್ ಶರ್ಮಾ ಸಹಾಯಕನಿಗೆ ಬೆದರಿಕೆ ವೀಡಿಯೊ ಹಾಗೂ ಸಂದೇಶಗಳನ್ನು ಸಹ ಕಳುಹಿಸಿದ್ದ. ಈ ಪ್ರಕರಣ ಸಂಬಂಧ ಮುಂಬೈ ಅಪರಾಧ ವಿಭಾಗದ ತಂಡವು ಆರೋಪಿ ಇರುವ ಸ್ಥಳವನ್ನು ಪತ್ತೆಹಚ್ಚಿದ್ದರು. ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಸೆ.30 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.