Thursday, December 18, 2025

ಚೆನ್ನೈನಲ್ಲಿ ‘ಮಾರ್ಕ್’ ಸುದ್ದಿಗೋಷ್ಠಿ | ಅಭಿಮಾನಿಗಳ ಹೃದಯ ಗೆದ್ದ ಕಿಚ್ಚ! ಅಸಲಿಗೆ ಆಗಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಈಗಾಗಲೇ ಪ್ರಚಾರದ ಹಂತದಲ್ಲಿದ್ದು, ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿ ವಿಶೇಷ ಗಮನ ಸೆಳೆದಿದೆ. ಸಿನಿಮಾ ಕುರಿತ ಮಾತುಕತೆಗಳ ಮಧ್ಯೆ ಕೇಳಿಬಂದ ಒಂದು ಉದ್ದೇಶಪೂರ್ವಕ ಪ್ರಶ್ನೆ ವೇದಿಕೆಯ ವಾತಾವರಣವನ್ನು ಕ್ಷಣಕಾಲ ಗಂಭೀರಗೊಳಿಸಿತು. ಆದರೆ ಅದಕ್ಕೆ ಸುದೀಪ್ ನೀಡಿದ ಸಂಯಮಿತ, ಆದರೆ ದೃಢ ಪ್ರತಿಕ್ರಿಯೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸುದ್ದಿಗೋಷ್ಠಿಯಲ್ಲಿ ‘ಮಾರ್ಕ್’ ಚಿತ್ರದ ನಾಯಕಿಯರಾದ ದೀಪ್ಷಿಕಾ ಮತ್ತು ರೋಷನಿ ಉಪಸ್ಥಿತರಿದ್ದರು. ಈ ವೇಳೆ ಪತ್ರಕರ್ತನೊಬ್ಬ ನಟಿಯೊಬ್ಬರತ್ತ ಉದ್ದೇಶಿಸಿ, ವೇದಿಕೆಯ ವ್ಯವಸ್ಥೆಯನ್ನು ಸಿನಿಮಾದ ಪಾತ್ರಗಳೊಂದಿಗೆ ಹೋಲಿಸಿ ಸಿನಿಮಾದ ಟ್ರೈಲರ್ ಚೆನ್ನಾಗಿದೆ, ಆದರೆ ನಿಮ್ಮ ಪಾತ್ರ ಹೇಗಿದೆ, ಈಗ ವೇದಿಕೆ ಮೇಲೆ ನಿಮ್ಮನ್ನು ಸೈಡಿನಲ್ಲಿ ಕುಳಿಸಿರುವಂತೆ ಸಿನಿಮಾನಲ್ಲಿಯೂ ನಿಮ್ಮನ್ನು ಸೈಡ್ ಲೈನ್ ಮಾಡಲಾಗಿದೆಯೇ?’ ಎಂದು ಉದ್ದೇಶಪೂರ್ವಕವಾಗಿ ಪ್ರಚೋದನಾತ್ಮಕ ಪ್ರಶ್ನೆ ಕೇಳಿದರು. ಪ್ರಶ್ನೆಯಿಂದ ಗಾಬರಿಗೊಂಡ ನಟಿಗೆ ಉತ್ತರಿಸಲು ಗೊಂದಲ ಉಂಟಾದಾಗ, ಮಧ್ಯಪ್ರವೇಶಿಸಿದ ಸುದೀಪ್ ವೇದಿಕೆಯಲ್ಲಿದ್ದ ವಾತಾವರಣವನ್ನೇ ತಿರುಗಿಸಿದರು.

“ಸಿನಿಮಾದಲ್ಲಿ ನಾಯಕಿಯರ ಪಾತ್ರಗಳು ಬಹಳ ಬಲವಾಗಿವೆ. ಇಲ್ಲಿ ಕುರ್ಚಿಯ ಜಾಗವೇ ಸಮಸ್ಯೆಯಾದರೆ, ನಾನೇ ಅತ್ತ ಕುಳಿತುಕೊಳ್ಳುತ್ತೇನೆ” ಎಂದು ಹೇಳಿದ ಸುದೀಪ್, ತಾವೇ ಜಾಗ ಬದಲಿಸಿ ನಟಿಯರನ್ನು ಮಧ್ಯದಲ್ಲಿ ಕೂರಿಸಿದರು. ಈ ನಡೆಗೆ ಸಭಾಂಗಣದಲ್ಲಿ ಚಪ್ಪಾಳೆಯ ಸದ್ದು ಕೇಳಿಬಂತು.

ನಂತರ ಮಾತನಾಡಿದ ಕಿಚ್ಚ, “ಇದು ಸಂಭ್ರಮದ ಕಾರ್ಯಕ್ರಮ. ಇಂತಹ ಕ್ಷಣಗಳನ್ನು ಅರ್ಥವಿಲ್ಲದ ಪ್ರಶ್ನೆಗಳ ಮೂಲಕ ಹಾಳು ಮಾಡಬೇಡಿ” ಎಂದು ನೇರವಾಗಿ ಹೇಳಿದರು. ಸುದೀಪ್ ಅವರ ಈ ಖಡಕ್ ನಿಲುವಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ತಮಿಳು ಸಿನಿಮಾ ವಲಯದವರೂ ಅವರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

error: Content is protected !!