ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಮನೆ ಮೈದಾನದಲ್ಲಿ ವೈಭವದ ಮದುವೆ, ವಿದೇಶದಲ್ಲಿ ಹನಿಮೂನ್ ಸಂಭ್ರಮ.. ಹೀಗೆ ಸುಂದರ ಕನಸುಗಳೊಂದಿಗೆ ಜೀವನ ಆರಂಭಿಸಬೇಕಿದ್ದ ನವಜೋಡಿಯ ಬಾಳಿನಲ್ಲಿ ಎರಡು ತಿಂಗಳಲ್ಲೇ ಬಿರುಗಾಳಿ ಎದ್ದಿದೆ. ಹನಿಮೂನ್ ಮುಗಿಸಿ ಮರಳಿದ ಹತ್ತೇ ದಿನಗಳಲ್ಲಿ ನವವಧುವೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಕಳೆದ ಅಕ್ಟೋಬರ್ 29ರಂದು 26 ವರ್ಷದ ಯುವತಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಹತ್ತು ದಿನಗಳ ಹಿಂದೆಯಷ್ಟೇ ಈ ಜೋಡಿ ಹನಿಮೂನ್ಗಾಗಿ ಶ್ರೀಲಂಕಾಕ್ಕೆ ತೆರಳಿತ್ತು. ಆದರೆ, ಅಲ್ಲಿ ಏನಾಯಿತೋ ಗೊತ್ತಿಲ್ಲ, ಪ್ರವಾಸ ಮುಗಿಸುವ ಮುನ್ನವೇ ದಂಪತಿ ಅರ್ಧದಲ್ಲೇ ಬೆಂಗಳೂರಿಗೆ ವಾಪಸ್ಸಾಗಿದ್ದರು.
ಬುಧವಾರ ಮಧ್ಯಾಹ್ನ ಪತಿಯ ಮನೆಯಲ್ಲೇ ನವವಧು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಈ ಘಟನೆಗೆ ಪತಿ ಮತ್ತು ಆತನ ಕುಟುಂಬದವರೇ ಕಾರಣ ಎಂದು ವಧುವಿನ ಪೋಷಕರು ಆರೋಪಿಸಿದ್ದಾರೆ. “ನಮ್ಮ ಮಗಳಿಗೆ ವಿಪರೀತ ಕಿರುಕುಳ ನೀಡಲಾಗಿದೆ, ಆ ಮಾನಸಿಕ ಹಿಂಸೆ ತಾಳಲಾರದೇ ಆಕೆ ಈ ನಿರ್ಧಾರ ಕೈಗೊಂಡಿದ್ದಾಳೆ” ಎಂದು ದೂರಿದ್ದಾರೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

