Tuesday, October 21, 2025

ಕರೂರು ಕಾಲ್ತುಳಿತ! ನಟ ವಿಜಯ್ ಬಂಧನ ಸಾಧ್ಯತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ಹಾಗೂ ನಟ ವಿಜಯ್ ಅವರ ಕರೂರು ಜಿಲ್ಲೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ವಿಷಯವಾಗಿ ನಟ ವಿಜಯ್‌ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಕ್ಕಳು, ಮಹಿಳೆಯರು ಸೇರಿದಂತೆ ಹಲವರು ಗಂಭೀರ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಇಲಾಖೆ ತಿಳಿಸಿದೆ.

ವಿಜಯ್ ಅವರ ಜನಸಂಪರ್ಕ ಕಾರ್ಯಕ್ರಮ ಇಂದು ಬೆಳಗ್ಗೆ 8.45ಕ್ಕೆ ನಾಮಕ್ಕಲ್‌ನಲ್ಲಿ ನಡೆಯಲಿದೆ ಎಂದು ಘೋಷಿಸಲಾಗಿತ್ತು. ಆದರೆ ವಿಜಯ್ ಬೆಳಗ್ಗೆ 8.45ಕ್ಕೆ ಚೆನ್ನೈನಿಂದ ಹೊರಟರು. ಬೆಳಗ್ಗೆ 6 ಗಂಟೆಯಿಂದಲೇ ಸಾವಿರಾರು ಜನ ಕಾದಿದ್ದರು. ಆದರೆ ವಿಜಯ್ ಮಧ್ಯಾಹ್ನ 2.30ಕ್ಕೆ ನಾಮಕ್ಕಲ್‌ಗೆ ತಲುಪಿದರು. ಈ ಸಭೆಯ ನಂತರ ಕರೂರಿಗೆ ಹೊರಟರು. ಬೆಳಗ್ಗಿನಿಂದ ಸಾವಿರಾರು ಜನ ಬಿಸಿಲಲ್ಲಿ ಕಾದಿದ್ದರು. ಮಧ್ಯಾಹ್ನ 12ಕ್ಕೆ ಕರೂರಿಗೆ ಬರುವುದಾಗಿ ಹೇಳಲಾಗಿತ್ತು, ಆದರೆ ಅವರು ಸಂಜೆ 7.30ಕ್ಕೆ ಬಂದರು.

ಇದರಿಂದಾಗಿ ಉಸಿರಾಡಲೂ ಜಾಗವಿಲ್ಲದಷ್ಟು ಜನಸಂದಣಿ ಹೆಚ್ಚಾಗಿತ್ತು. ಒಬ್ಬರ ಮೇಲೊಬ್ಬರು ಬಿದ್ದಿದ್ದರಿಂದ ಹಲವರು ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಲ್ಲಿ ಅನೇಕ ಮಕ್ಕಳು ಮತ್ತು ಮಹಿಳೆಯರು ಬಲಿಯಾಗಿದ್ದಾರೆ. ಈ ಘಟನೆ ಕರೂರು ಭಾಗದಲ್ಲಿ ಆಘಾತ ಮೂಡಿಸಿದೆ. 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಈ ಪ್ರಕರಣದಲ್ಲಿ ಟಿವಿಕೆ ಅಧ್ಯಕ್ಷ ವಿಜಯ್ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪೊಲೀಸರ ಹಲವು ಷರತ್ತುಗಳನ್ನು ಟಿವಿಕೆ ಕಡೆಗಣಿಸಿದೆ ಎಂದೂ ಹೇಳಲಾಗುತ್ತಿದೆ.

error: Content is protected !!