ಹೊಸದಿಗಂತ ವರದಿ,ಮಂಡ್ಯ-ಕೆಆರ್‌ಎಸ್ :
ಉತ್ತರ, ದಕ್ಷಿಣ ಭಾರತದ ಪರಂಪರೆಯ ಸಮ್ಮೀಲನವಾಗಿರುವ ಕಾವೇರಿ ಆರತಿಯನ್ನು ಮೊದಲ ಬಾರಿಗೆ ಬಹಳ ವಿಶೇಷವಾಗಿ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ. ಕಾವೇರಿ ಆರತಿ ಎಲ್ಲರನ್ನೂ ಒಳಗೊಂಡಿದ್ದು ಪವಿತ್ರ ಭಾವನೆ ಎಲ್ಲರಲ್ಲೂ ಬಂದು ಜನರ ಮನಸ್ಸಿಗೆ ಮುದ ನೀಡಲಿ ಎಂದು ಸುತ್ತೂರು ಮಹಾಸಂಸ್ಥಾಪನ ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿಗಳು ತಮ್ಮ ಕನಸಿನ ಯೋಜನೆಯಾದ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬರದ ನಾಡನ್ನು ಹಸಿರು ಮಾಡಿದ ಕೆಆರ್ ಎಸ್ ನ ಪವಿತ್ರ ಸ್ಥಳದಲ್ಲಿ ಕಾವೇರಿ ಆರತಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು ಎಂದರು.

ಪ್ರಕೃತಿಯನ್ನು ಪೂಜಿಸಿವುದು ನಮ್ಮ ಸಂಸ್ಕೃತಿಯಲ್ಲೇ ಬಂದಿದೆ. ಹರಪ್ಪಾ ಮತ್ತು ಮೊಹೆಂಜದಾರೋ ಕಾಲದಿಂದಲೂ ಇದನ್ನು ಕಾಣಬಹುದು. ಆಧುನಿಕ ಯುಗಮಾನದಲ್ಲೂ ಇದು ಮುಂದುವರೆಯುತ್ತಾ ಬಂದಿದೆ. ಉತ್ತರದ ಗಂಗೆಯಂತೆ ಅಮೆರಿಕದ ಗ್ರ್ಯಾಂಡ್ ಕೆನಲ್ ನದಿಯಂತೆ ಕಾವೇರಿ ವರ್ಷಪೂರ್ತಿ ತುಂಬಿ ಹರಿಯಲಿ ಎಂದು ಆಶಿಸಿದರು.
ಕಾವೇರಿ ಆರತಿ ಮಾಡುವಾಗ ನದಿಯನ್ನು ಅಶುಚಿಗೊಳಿಸುವುದಿಲ್ಲ ಎಂಬ ಸಂಕಲ್ಪ ಮಾಡಬೇಕು. ನದಿಯ ಪಾವಿತ್ರತೆ ಕಾಪಾಡಬೇಕು. ಪ್ರಕೃತಿಯನ್ನು ನಾಶ ಮಾಡಬಾರದು. ಪವಿತ್ರ ಭಾವನೆ ಎಲ್ಲರಲ್ಲೂ ಇರಲಿ ಎಂದು ಹೇಳಿದರು.