ಹೊಸದಿಗಂತ ವರದಿ ಬೆಳಗಾವಿ:
ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳುವ ಬಿಜೆಪಿಯವರು ಪ್ರಧಾನಿ ಬಳಿ ಮಾತನಾಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಕೊಡಿಸಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದರು.
ಗುರುವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಹಣ ಬಾಕಿ ಉಳಿಸಿದ ಕಾರಣ ಇದೀಗ ನಮಗೆ ಸಮಸ್ಯೆಯಾಗಿದೆ. ಶಕ್ತಿ ಯೋಜನೆ ಬಾಕಿ ಹಣ 4 ಸಾವಿರ ಕೋಟಿ ಬಾಕಿ ಇದೆ. 2023ರಲ್ಲಿ ಬಿಜೆಪಿಯವರು ಅಧಿಕಾರ ಬಿಡುವಾಗ 1700 ಕೋಟಿ ಬಾಕಿ ಇಟ್ಟು ಹೋಗಿದ್ದರು. ನಮ್ಮ ಸರ್ಕಾರ ಅದನ್ನು ಸರಿದೂಗಿಸುತ್ತಿದೆ ಎಂದರು.
ನಮ್ಮ ಸರ್ಕಾರ ಬಂದ ಮೇಲೆ 5900 ಸಾವಿರ ಕೋಟಿ ತೀರಿಸುತ್ತಿದ್ದೇವೆ. 10 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿದ್ದೇವೆ. 2400 ಕೋಟಿ ರೂ.ವೆಚ್ಚ ಮಾಡಿ 5800 ಬಸ್ ಖರೀದಿ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ಮಹಿಳಾ ವಿರೋಧಿ ಪಕ್ಷ. ಶಕ್ತಿ ಯೋಜನೆ ಅವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿ ಕಾಲದಲ್ಲಿ ನಿತ್ಯ 84 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು. ಈಗ 1 ಕೋಟಿಗೆ ದಾಟಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳುವ ಬಿಜೆಪಿ ನಾಯಕರು, ನರೇಗಾ ಅನುದಾನ, 5 ನೇ ಹಣಕಾಸು ಆಯೋಗದ ಹಣ, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ, ಜಲಜೀವನ್ 2000 ಕೋಟಿ ಹಣವನ್ನು ಪ್ರಧಾನಿ ಜೊತೆ ಮಾತನಾಡಿ ಕೊಡಿಸಲಿ ಎಂದರು.

