ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಶ್ಚಿಮ ಏಷ್ಯಾ ನಡುವಿನ ರಾಜತಾಂತ್ರಿಕ ಸಂವಾದಕ್ಕೆ ಹೊಸ ಚೈತನ್ಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಜೋರ್ಡಾನ್ ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರನ್ನು ಅಮ್ಮನ್‌ನಲ್ಲಿ ಭೇಟಿಯಾಗಿದ್ದಾರೆ. ಡಿಸೆಂಬರ್ 15ರ ಸಂಜೆ ಹುಸೇನಿಯಾ ಅರಮನೆಯಲ್ಲಿ ನಡೆದ ಈ ಸಭೆಯಲ್ಲಿ ದ್ವಿಪಕ್ಷೀಯ ಸಂಬಂಧಗಳ ಜೊತೆಗೆ ಪ್ರಾದೇಶಿಕ ಹಾಗೂ ಜಾಗತಿಕ ಭದ್ರತಾ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆ, ಉಗ್ರವಾದದ ವಿರುದ್ಧ ಜೋರ್ಡಾನ್ ಸ್ಪಷ್ಟ ಹಾಗೂ ದೃಢ ನಿಲುವು ಹೊಂದಿರುವುದನ್ನು ಶ್ಲಾಘಿಸಿದರು. ರಾಜ ಅಬ್ದುಲ್ಲಾ II ಅವರ ನಾಯಕತ್ವದಲ್ಲಿ ಜೋರ್ಡಾನ್ ಈ ಸವಾಲುಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಬಲವಾದ ಸಂದೇಶ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಶಾಂತಿ, ಸ್ಥಿರತೆ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವಲ್ಲಿ ಜೋರ್ಡಾನ್ ವಹಿಸುತ್ತಿರುವ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಮೋದಿ ಹೇಳಿದರು.
ಭಾರತ–ಜೋರ್ಡಾನ್ ನಡುವಿನ ಹಿಂದಿನ ಸಂವಾದಗಳನ್ನು ನೆನಪಿಸಿಕೊಂಡ ಪ್ರಧಾನಿ, 2018ರಲ್ಲಿ ರಾಜ ಅಬ್ದುಲ್ಲಾ II ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಇಸ್ಲಾಮಿಕ್ ಪರಂಪರೆ ಕುರಿತ ಸಮ್ಮೇಳನದಲ್ಲಿ ಇಬ್ಬರೂ ಭಾಗವಹಿಸಿದ್ದನ್ನು ಸ್ಮರಿಸಿದರು. ಅದಕ್ಕೂ ಮೊದಲು 2015ರಲ್ಲಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಹಿಂಸಾತ್ಮಕ ಉಗ್ರವಾದದ ವಿರುದ್ಧ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿ ಭೇಟಿಯಾದ ಸಂದರ್ಭವನ್ನೂ ಅವರು ಉಲ್ಲೇಖಿಸಿದರು. ಆ ಸಮಯದಲ್ಲಿಯೂ ರಾಜ ಅಬ್ದುಲ್ಲಾ II ಅವರ ವಿಚಾರಗಳು ಪ್ರೇರಣಾದಾಯಕವಾಗಿದ್ದವು ಎಂದು ಮೋದಿ ಹೇಳಿದರು.

