ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಹೃದಯಪೂರ್ವಂ ಸಿನಿಮಾ ಇತ್ತೀಚಿಗೆ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿದ್ದು, ಈಗ ಬಹು ಬೇಗನೆ ಓಟಿಟಿಗೆ ಬರಲು ಸಿದ್ಧವಾಗಿದೆ. ಆಗಸ್ಟ್ 28 ರಂದು ತೆರೆಗೆ ಬಂದಿದ್ದ ಈ ಚಿತ್ರ, ಕೇವಲ ಒಂದು ತಿಂಗಳೊಳಗೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಸೆಪ್ಟೆಂಬರ್ 26 ರಿಂದ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಹೃದಯಪೂರ್ವಂ ಚಿತ್ರದ ಕಥೆ ವಿಶಿಷ್ಟ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ. ಹೃದಯ ಕಸಿ ಮಾಡಿಸಿಕೊಂಡ ವ್ಯಕ್ತಿಯ ಜೀವನವನ್ನು ಚಿತ್ರಿಸುವ ಈ ಸಿನಿಮಾದಲ್ಲಿ, ಆತನಿಗೆ ಸೇನಾಧಿಕಾರಿಯ ಹೃದಯವನ್ನು ಕಸಿ ಮಾಡಲಾಗುತ್ತದೆ. ಆ ಸೇನಾಧಿಕಾರಿಯ ಮಗಳು ಮತ್ತು ಪತ್ನಿಯೊಂದಿಗೆ ಆತ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಾನೆ. ಈ ಸಂದರ್ಭಗಳ ಮೂಲಕ ಕಥೆ ಭಾವುಕ ತಿರುವು ಪಡೆಯುತ್ತದೆ. ಮೋಹನ್ ಲಾಲ್ ಅವರು ಸಂದೀಪ್ ಬಾಲಕೃಷ್ಣನ್ ಪಾತ್ರದಲ್ಲಿ ಮಿಂಚಿದ್ದು, ಮಾಳವಿಕಾ ಮೋಹನನ್ ಹರ್ಷಿತಾ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಸತ್ಯನ್ ಅಂತಿಕಾಡ್ ನಿರ್ದೇಶನ ಮತ್ತು ಜಸ್ಟಿನ್ ಪ್ರಭಾಕರನ್ ಸಂಗೀತ ಈ ಸಿನಿಮಾದ ಪ್ರಮುಖ ಆಕರ್ಷಣೆ.
ಕೇವಲ 30 ಕೋಟಿ ಬಜೆಟ್‌ನೊಂದಿಗೆ ನಿರ್ಮಿತವಾದ ಈ ಚಿತ್ರ, ಬಿಡುಗಡೆಯ ನಂತರ ಉತ್ತಮ ಪ್ರತಿಕ್ರಿಯೆ ಪಡೆದು ಈಗಾಗಲೇ ಸುಮಾರು 80 ಕೋಟಿ ಕಲೆಕ್ಷನ್ ಗಳಿಸಿರುವುದಾಗಿ ವರದಿಯಾಗಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರು ಕಥೆ, ನಟನೆಯ ಶಕ್ತಿ ಮತ್ತು ಸಂಗೀತವನ್ನು ಮೆಚ್ಚಿಕೊಂಡಿದ್ದಾರೆ.