Sunday, September 21, 2025

ಕನಕಪುರದಲ್ಲಿ ನೈತಿಕ ಪೊಲೀಸ್ ಗಿರಿ: ಐವರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕನಕಪುರ ಠಾಣೆ ಪೊಲೀಸರು ಒಬ್ಬ ಮಹಿಳೆಯನ್ನು ಸೇರಿಸಿ ಐವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನವಾಜ್, ಕಬೀರ್, ಸುಯೋಲ್, ನಯಾಜ್ ಹಾಗೂ ಮಹಿಳೆಯೊಬ್ಬರು ಸೇರಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಇಂದಿರಾನಗರದಲ್ಲಿ ಹಿಂದೂ ಯುವಕ ಮಹೇಶ್ ಹಾಗೂ ಮುಸ್ಲಿಂ ಮಹಿಳೆ ಹಸೀನಾ ಬಾನು ಮೇಲೆ ಅಕ್ರಮ ಸಂಬಂಧದ ನೆಪದಲ್ಲಿ ಹಲ್ಲೆ ನಡೆದಿದೆ. ಆರೋಪಿಗಳು ಕೇವಲ ಹಲ್ಲೆ ಮಾಡಿದಷ್ಟೇ ಅಲ್ಲ, ಇವರಿಬ್ಬರ ತಲೆ ಬೋಳಿಸುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಹಲ್ಲೆಯ ಹಿಂದೆ ಮಹಿಳೆಯ ಕುಟುಂಬಸ್ಥರು ಹಾಗೂ ಸಂಬಂಧಿಕರೇ ಇದ್ದರು. ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಹಲ್ಲೆಗೆ ಒಳಗಾದವರನ್ನು ರಕ್ಷಿಸಿ ಠಾಣೆಗೆ ಕರೆದುಕೊಂಡು ಬಂದು ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗೆ ರಾಮನಗರದಲ್ಲೂ ಹೀಗೇ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯನ್ನು ಕೆಲವರು ಅಡ್ಡಗಟ್ಟಿ ಪ್ರಶ್ನಿಸಿದ್ದರು. ಈ ವಿಡಿಯೋ ವೈರಲ್ ಆಗಿ ಜನರ ಗಮನ ಸೆಳೆದಿತ್ತು. ಕನಕಪುರದ ಇಂದಿನ ಪ್ರಕರಣವು ಮತ್ತೆ ನೈತಿಕ ಪೊಲೀಸ್ ಗಿರಿಯ ಬಗ್ಗೆ ಆತಂಕ ಹುಟ್ಟಿಸಿದೆ.

ಇದನ್ನೂ ಓದಿ