Thursday, September 18, 2025

ಮೋಸ್ಟ್ ವಾಂಟೆಡ್ ಕ್ರಿಮಿನಲ್​ ಮಯಾಂಕ್ ಸಿಂಗ್ ಅಜರ್ಬೈಜಾನ್ ದೇಶದಿಂದ ಜಾರ್ಖಂಡ್‌ಗೆ ಹಸ್ತಾಂತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋಸ್ಟ್ ವಾಂಟೆಡ್ ಕ್ರಿಮಿನಲ್​ ಮಯಾಂಕ್ ಸಿಂಗ್​ ಅಲಿಯಾಸ್​ ಸುನಿಲ್ ಮೀನಾ ಹಲವು ಕಾನೂನು ಅಡೆತಡೆಗಳ ಬಳಿಕ ಅಜರ್ಬೈಜಾನ್ ದೇಶದಿಂದ ಕೊನೆಗೂ ಜಾರ್ಖಂಡ್‌ಗೆ ಕರೆತರುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾರ್ಖಂಡ್ ಎಟಿಎಸ್ ಎಸ್​ಪಿ ರಿಷಭ್ ಝಾ ಅವರು ಸ್ವತಃ ಮಯಾಂಕ್ ಸಿಂಗ್​ನನ್ನು ಕರೆತರಲು ಅಜರ್ಬೈಜಾನ್​ಗೆ ತೆರಳಿದ್ದರು.

ಜಾರ್ಖಂಡ್ ಎಟಿಎಸ್ ಅಧಿಕಾರಿಗಳ ತಂಡವು ಶನಿವಾರ ಬೆಳಗ್ಗೆ ಬಿಗಿ ಭದ್ರತೆಯಲ್ಲಿ ಅಜೆರ್ಬೈಜಾನ್ ಗಣರಾಜ್ಯದಿಂದ ಜಾರ್ಖಂಡ್‌ನ ರಾಂಚಿಗೆ ಕರೆತಂದರು. ಬಳಿಕ ಬಿಗಿ ಭದ್ರತೆಯಲ್ಲಿ ನೇರವಾಗಿ ರಾಮಗಢ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ನ್ಯಾಯಾಲಯದ ಹೆಚ್ಚುವರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಂದೀಪ್ ಬರ್ಮನ್ ಅವರ ಮುಂದೆ ದರೋಡೆಕೋರನನ್ನು ಹಾಜರುಪಡಿಸಲಾಯಿತು.

ದರೋಡೆಕೋರ ಮಯಾಂಕ್​ ಸಿಂಗ್​ನನ್ನು ಭಾರತಕ್ಕೆ ಕರೆತಂದ ಸುದ್ದಿ ಗೊತ್ತಾಗಿ ಜಾರ್ಖಂಡ್‌ನ ಎಲ್ಲಾ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯ ಸೂಚನೆಯ ಮೇರೆಗೆ, ಎಲ್ಲಾ ರೀತಿಯ ಪುರಾವೆಗಳು ಮತ್ತು ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜಾರ್ಖಂಡ್ ಪೊಲೀಸ್ ಪ್ರಧಾನ ಕಚೇರಿಯ ಮಾಹಿತಿಯ ಪ್ರಕಾರ, ಜಾರ್ಖಂಡ್‌ನ ವಿವಿಧ ಪೊಲೀಸ್​ ಠಾಣೆಗಳಲ್ಲಿ ಮಯಾಂಕ್ ಸಿಂಗ್ ವಿರುದ್ಧ ಒಟ್ಟು 48 ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಪ್ರಕರಣಗಳು ಹಜಾರಿಬಾಗ್ ಜಿಲ್ಲೆಯಲ್ಲಿ ದಾಖಲಾಗಿವೆ. ಹಜಾರಿಬಾಗ್‌ನ ಬರ್ಕಾಗಾಂವ್, ಕೊರ್ರಾ, ಹಜಾರಿಬಾಗ್ ಸದರ್ ಸೇರಿದಂತೆ ಮುಂತಾದ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಒಂದು ಡಜನ್​ಗೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದಲ್ಲದೆ, ರಾಂಚಿ, ರಾಮಗಢ, ಪಲಾಮು, ಗಿರಿಧಿಹ್‌, ರಾಯ್‌ಪುರ ಮತ್ತು ರಾಜಸ್ಥಾನದಲ್ಲೂ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ರಾಜಸ್ಥಾನ ಮತ್ತು ಛತ್ತೀಸ್‌ಗಢ ಪೊಲೀಸರು ದರೋಡೆಕೋರ ಮಯಾಂಕ್ ಸಿಂಗ್​ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಲವು ಪೊಲೀಸ್​ ಠಾಣೆgಳಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಜಾರ್ಖಂಡ್ ಎಟಿಎಸ್ ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ, 29.10.2024 ರಂದು, ಮಯಾಂಕ್​ನನ್ನು ಅಜೆರ್ಬೈಜಾನ್​ನಲ್ಲಿ ಬಂಧಿಸಲಾಗಿತ್ತು. ಬಂಧನದ ನಂತರ, ಅಜೆರ್ಬೈಜಾನ್ ಹಸ್ತಾಂತರದ ಬಗ್ಗೆ ದಾಖಲೆಯನ್ನು ಕೋರಿತ್ತು. ಸದ್ಯ ಎಲ್ಲ ಕಾನೂನು ಅಡೆತಡೆಗಳ ಬಳಿಕ ಮಯಾಂಕ್‌ನ ಹಸ್ತಾಂತರವಾಗಿದೆ.

ಇದನ್ನೂ ಓದಿ