ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಮಾನ್‌ಪಾಲ್ ಬಾದ್ಲಿನನ್ನು ಕಾಂಬೋಡಿಯಾದಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳು ಮತ್ತು ಹರಿಯಾಣ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿಬಂಧಿಸಿವೆ.
ಬಾದ್ಲಿ 2018ರ ಆಗಸ್ಟ್ 29ರಂದು ಭಾರತದ ಜೈಲಿನಿಂದ ಪೆರೋಲ್‌ನಲ್ಲಿ ಬಿಡುಗಡೆಯಾದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದನು. ಆತ ವಿದೇಶದಿಂದಲೇ ತನ್ನ ಭೂಗತ ಕಾರ್ಯಾಚರಣೆಗಳನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಾಂಬೋಡಿಯಾದಲ್ಲಿ ಆತನ ಬಂಧನವು ಅಕ್ರಮ ಚಟುವಟಿಕೆಗಳನ್ನು ತಡೆಯುವ ಪ್ರಯತ್ನದಲ್ಲಿ ಪ್ರಮುಖ ಯಶಸ್ಸು ಎಂದೇ ಬಣ್ಣಿಸಲಾಗುತ್ತಿದೆ. ಹರಿಯಾಣ ಪೊಲೀಸರು ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡುವವರಿಗೆ 7 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ಬಾದ್ಲಿಯ ಭೂಗತ ಜೀವನವು 2000ದಲ್ಲಿ ಆತನ ಚಿಕ್ಕಪ್ಪನ ಕೊಲೆಯಿಂದ ಆರಂಭವಾಯಿತು. ಟ್ರ್ಯಾಕ್ಟರ್ ರಿಪೇರಿ ಕೆಲಸದಿಂದ ಆರಂಭಿಸಿದ ಆತ, ಕ್ರೂರತೆ ಮತ್ತು ಸಂಘಟಿತ ಅಪರಾಧಗಳಿಗೆ ಹೆಸರಾಗಿದ್ದ. ಜೈಲಿನಲ್ಲಿದ್ದಾಗಲೂ ಕೊಲೆಗಳನ್ನು ಯೋಜಿಸಿದ ಆರೋಪವಿರುವ ಆತ, ಹರಿಯಾಣ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಮೊದಲಿಗನಾಗಿದ್ದ. ಕಾಂಬೋಡಿಯಾದ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಭಾರತೀಯ ಸಂಸ್ಥೆಗಳು ಆತನನ್ನು ಬಂಧಿಸಿವೆ.