Saturday, January 10, 2026

ಆಧಾರ್ ಕಾರ್ಡ್ ಮಾಡಿಸಲು ಹೋದ ತಾಯಿ-ಮಗು ಮನೆಗೆ ಮರಳಲೇ ಇಲ್ಲ: ಆಗಿದ್ದಾದ್ರು ಏನು?

ಹೊಸದಿಗಂತ ಅಂಕೋಲಾ:

ಆಧಾರ್ ಕಾರ್ಡ್ ಮಾಡಿಸುವುದಾಗಿ ಮಗನೊಂದಿಗೆ ಮನೆಯಿಂದ ಹೊರಬಂದ ಮಹಿಳೆಯೊಬ್ಬರು ತನ್ನ 3 ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ತಾಲೂಕಿನ ಹಟ್ಟಿಕೇರಿಯ ಮಾವಿನಕೇರಿ ನಿವಾಸಿಯಾಗಿದ್ದು, ಸದ್ಯ ಅಂಕೋಲಾ ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಮ್ತಾಜ ಸದ್ದಾಂಹುಸೇನ್ ಮುಕ್ತೆದಾರ್ (28) ಮತ್ತು ಆಕೆಯ ಮಗ ಅರ್ಮಾನ್ (3) ಕಾಣೆಯಾದವರು.

ಕಳೆದ ಡಿಸೆಂಬರ್ 30 ರಂದು ಮಧ್ಯಾಹ್ನ 12 ಗಂಟೆಗೆ “ಮಗನ ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುತ್ತೇನೆ” ಎಂದು ಮನೆಯಲ್ಲಿ ಹೇಳಿ ಮಮ್ತಾಜ್ ಅವರು ಮಗನೊಂದಿಗೆ ಹೊರಬಂದಿದ್ದರು. ಸಂಜೆಯಾದರೂ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದ ಕಾರಣ ಮಹಿಳೆಯ ಪತಿ ಸದ್ದಾಂ ಹುಸೇನ್ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಹಿಳೆ ನೀಲಿ ಬಣ್ಣದ ಚೂಡಿದಾರ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕುತ್ತಿಗೆಯಲ್ಲಿ ಕರಿಮಣಿ ಸರ ಮತ್ತು ಕಿವಿಯಲ್ಲಿ ಓಲೆಗಳಿವೆ. ಬಾಲಕ ನೀಲಿ ಬಣ್ಣದ ಟಿ-ಶರ್ಟ್ ಮತ್ತು ಕೆಂಪು ಬಣ್ಣದ ಚಡ್ಡಿ ಧರಿಸಿದ್ದಾನೆ.

ಮೇಲಿನ ವಿವರಗಳಿಗೆ ಸಾಮ್ಯತೆ ಇರುವ ವ್ಯಕ್ತಿಗಳು ಕಂಡುಬಂದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

error: Content is protected !!