ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ನಡೆದ ಘಟನೆಯೊಂದು ಸದ್ಯ ವೈರಲ್ ಆಗಿದೆ. ‘ಮನೆ ಮನೆಗೂ ಪೊಲೀಸ್’ ಕಾರ್ಯಕ್ರಮದಡಿ ಗ್ರಾಮಸ್ಥರ ಸಮಸ್ಯೆ ಆಲಿಸಲು ಮನೆ ಬಾಗಿಲಿಗೆ ತೆರಳಿದ್ದ ಪೊಲೀಸರಿಗೆ, ಅಲ್ಲಿನ ಅಜ್ಜಿಯೊಬ್ಬರು ಹೇಳಿದ ಸಮಸ್ಯೆ ಕಂಡು ತಬ್ಬಿಬ್ಬಾಗಿದ್ದಾರೆ.
ನಿಮ್ಮ ಸಮಸ್ಯೆ ಏನು ಎಂದು ಪೊಲೀಸರು ಕೇಳಿದಾಗ, ಬೀದಿ ದೀಪದಿಂದ ಹಿಡಿದು ನಮಗೆ ಬೇರೆ ಯಾವುದೇ ಸಮಸ್ಯೆ ಇಲ್ಲ, ಎಂದ ಅಜ್ಜಿ, ಆದರೆ ನನ್ನ ಮಗನಿಗೆ ಮದುವೆ ಆಗುತ್ತಿಲ್ಲ, ಹೆಣ್ಣು ಸಿಗುತ್ತಿಲ್ಲ. ದಯವಿಟ್ಟು ನನ್ನ ಮಗನಿಗೆ ಒಂದು ಹೆಣ್ಣು ಹುಡುಕಿಕೊಡಿ, ಎಂದು ಪೊಲೀಸರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೆಣ್ಣು ಸಿಗದ ಕಾರಣ ನನ್ನ ಮಗನಿಗೆ ಮದುವೆ ಮಾಡಲು ಸಾಧ್ಯವಾಗುತ್ತಿಲ್ಲ. ಅದೇ ನನ್ನ ದೊಡ್ಡ ಸಮಸ್ಯೆ ಎಂದು ಹೇಳಿಕೊಂಡಿದ್ದಾರೆ.
ಸಾರ್ವಜನಿಕ ಸಮಸ್ಯೆಗಳ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಈ ವೈಯಕ್ತಿಕ ಮತ್ತು ಮನವಿಯ ರೂಪದ ಸಮಸ್ಯೆಯು ಶಾಕ್ ನೀಡಿದೆ. ಸದ್ಯ, ಅಜ್ಜಿ ಪೊಲೀಸರ ಬಳಿ ಸಮಸ್ಯೆ ಹೇಳಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.