Tuesday, December 16, 2025

ಕಾರ್ತಿಕ ದೀಪಕ್ಕೆ ಅನುಮತಿ ನೀಡಿದ ನ್ಯಾಯಮೂರ್ತಿ ಪದಚ್ಯುತಿಗೆ ‘ಕೈ’ ಸಂಸದರ ಸಹಿ: ದೇಶಪಾಂಡೆ ಕಿಡಿ

ಹೊಸದಿಗಂತ ಬೀದರ್:

ತಮಿಳುನಾಡಿನ ಸುಪ್ರಸಿದ್ಧ ತಿರುಪಾರಂಕುಂದ್ರಂ ಬೆಟ್ಟದ ಕಾರ್ತಿಕೇಯ ದೇವಾಲಯದಲ್ಲಿ ಕಾರ್ತಿಕ ದೀಪವನ್ನು ಹಚ್ಚಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರನ್ನು ಪದಚ್ಯುತಿಗೊಳಿಸಬೇಕೆಂದು ಕೋರಿ ಸಲ್ಲಿಸಲಾದ ಪತ್ರಕ್ಕೆ ಕರ್ನಾಟಕದ ಮೂವರು ಕಾಂಗ್ರೆಸ್ ಸಂಸದರು ಸಹಿ ಹಾಕಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಇಂಡಿ ಒಕ್ಕೂಟಕ್ಕೆ ಬೆಂಬಲಿಸಿ ಕರ್ನಾಟಕದ ರಾಯಚೂರು ಸಂಸದ ಕುಮಾರ್ ನಾಯಕ್, ಹಾಸನ ಸಂಸದ ಶ್ರೇಯಸ್ ಪಟೇಲ್, ಹಾಗೂ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಈ ಮನವಿಗೆ ಸಹಿ ಹಾಕಿರುವುದು ಸಮಸ್ತ ಕನ್ನಡಿಗರು ಮತ್ತು ವಿಶ್ವದ ಹಿಂದೂಗಳ ಭಾವನೆಗೆ ಮಾಡಿದ ಅವಮಾನ ಎಂದು ಬೀದರ್‌ನ ವೇದವ್ಯಾಸ ವೇದಾಧ್ಯಯನ ಕೇಂದ್ರದ ಸಂಚಾಲಕ ವಿ.ಕೆ. ದೇಶಪಾಂಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸ ದಿಗಂತಕ್ಕೆ ಪ್ರತಿಕ್ರಿಯಿಸಿದ ವಿ.ಕೆ. ದೇಶಪಾಂಡೆ ಅವರು ಕಾಂಗ್ರೆಸ್ ಸಂಸದರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. “ಇಂದು ತಮಿಳುನಾಡಿನ ದೇವಾಲಯದಲ್ಲಿ ದೀಪ ಹಚ್ಚುವುದನ್ನು ವಿರೋಧಿಸಿದ ಕಾಂಗ್ರೆಸ್ಸಿಗರು, ನಾಳೆ ಕರ್ನಾಟಕದ ದೇವಾಲಯಗಳಲ್ಲೂ ದೀಪ ಹಚ್ಚದಂತೆ ಕಾನೂನು ತಂದರೂ ಹಿಂದೂಗಳು ಆಶ್ಚರ್ಯ ಪಡಬೇಕಿಲ್ಲ. ನಾಳೆ ನಮ್ಮೂರಿನ ದೇವಾಲಯದ ದೀಪ ಆರಿಸಲಿದೆ ಕಾಂಗ್ರೆಸ್, ಎಚ್ಚರ!” ಎಂದು ಅವರು ಎಚ್ಚರಿಕೆ ನೀಡಿದರು.

ಭಾರತದ ಅಸ್ಮಿತೆ ಮತ್ತು ಸಂಸ್ಕೃತಿಯನ್ನು ಮೊಘಲರ ದಬ್ಬಾಳಿಕೆಯಿಂದ ರಜಪೂತರು, ಮರಾಠರು, ವಿಜಯನಗರ ಮತ್ತು ಒಡೆಯರ್ ಅರಸರು ಉಳಿಸಿಕೊಂಡು ಬಂದಿದ್ದಾರೆ. ಬ್ರಿಟಿಷರಿಗಿಂತಲೂ ಇಂದಿನ ಕಾಂಗ್ರೆಸ್ ವಿಷಕಾರಿ. ಮಹಾತ್ಮ ಗಾಂಧೀಜಿಯವರ ‘ರಘುಪತಿ ರಾಘವ ರಾಜಾರಾಮ್’ ತತ್ವವನ್ನು ರಾಹುಲ್ ಗಾಂಧಿ ನೇತೃತ್ವದ ಈಗಿನ ಕಾಂಗ್ರೆಸ್ ಸಂಪೂರ್ಣವಾಗಿ ಮರೆತಿದೆ.

ಜಿನ್ನಾ ತತ್ವಾದರ್ಶಗಳನ್ನು ಇಂಡಿಯಾ ಒಕ್ಕೂಟದ ಪಕ್ಷಗಳು ಪಾಲಿಸುತ್ತಿದ್ದು, ಹಿಂದೂ ಸಂಸ್ಕೃತಿಯ ಮೇಲೆ ಘಾಸಿ ಮಾಡಲು ಇವರಿಗೆ ಇಸ್ಲಾಮಿಕ್ ದೇಶಗಳಿಂದ ಹಣ ಬರುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಈ ಕುರಿತು ಸಿಬಿಐ ಮತ್ತು ಎನ್.ಐ.ಎ ಸಂಸ್ಥೆಗಳಿಂದ ತನಿಖೆ ನಡೆಸಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನ್ಯಾಯಾಲಯದ ಕಾರ್ಯಕ್ಕೆ ಅಡಚಣೆ ಉಂಟು ಮಾಡಿ, ನ್ಯಾಯಾಧೀಶರ ತೀರ್ಪಿನ ವಿರುದ್ಧ ಪದಚ್ಯುತಿಗೆ ಒತ್ತಾಯಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಿರುವ ಇಂಡಿ ಒಕ್ಕೂಟದ ಸಂಸದರನ್ನು ಕೂಡಲೇ ಸಂಸತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಎಲ್ಲಾ ಹಿಂದೂಪರ ಸಂಘಟನೆಗಳು ಸೇರಿಕೊಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸಲಿವೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಚ್ಚರಿಕೆ ನೀಡಿರುವ ಅವರು, “ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ ದೇಶದಲ್ಲಿ ಎಮರ್ಜೆನ್ಸಿ ಘೋಷಿಸಿದ್ದರು. ಇಂದಿನ ಕಾಂಗ್ರೆಸ್ ವರ್ತನೆಯೂ ನ್ಯಾಯಾಂಗ ವ್ಯವಸ್ಥೆ ಪರಿಪಾಲನೆ ಮಾಡಲ್ಲ ಎನ್ನುವುದಾಗಿದೆ. ಇದು ಪ್ರಜಾಪ್ರಭುತ್ವದ ಎರಡು ಸ್ತಂಭಗಳಿಗೂ ಸತತ ಘಾಸಿಗೊಳಿಸಿ ದೇಶದ ಬಹುಸಂಖ್ಯಾತರ ಭಾವನೆಗೆ ಧಕ್ಕೆ ಉಂಟು ಮಾಡುತ್ತದೆ. ಇದೇನಾ ನಿಮ್ಮ ನೀತಿ ಎಂಬುದು ಬಹಿರಂಗವಾಗಿ ಲಿಖಿತ ರೂಪದಲ್ಲಿ ಹೇಳಿಕೆ ನೀಡಲಿ” ಎಂದು ಆಗ್ರಹಿಸಿದ್ದಾರೆ.

error: Content is protected !!