Sunday, January 11, 2026

ಮಟನ್, ಚಿಕನ್, ಬಿರಿಯಾನಿ ಚರ್ಚೆ ಅಷ್ಟೇ! ಭೋಜನಕೂಟದ ರಹಸ್ಯ ಬಿಚ್ಚಿಟ್ಟ ಮಾಜಿ ಸಚಿವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ರಾಜಕೀಯ ಬೆಳವಣಿಗೆಗಳ ಮಧ್ಯೆಯೇ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರು ರಾಜಕೀಯದಲ್ಲಿ ಕೇಳಿಬರುತ್ತಿರುವ ಹಲವು ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತರ ಜೊತೆ ನಡೆದ ಭೋಜನಕೂಟದ ಕುರಿತು ಸ್ಪಷ್ಟನೆ ನೀಡಿದ ಸೋಮಶೇಖರ್, ಅಲ್ಲಿ ಯಾವುದೇ ರೀತಿಯ ರಾಜಕೀಯ ಚರ್ಚೆ ನಡೆಯಲಿಲ್ಲ ಎಂದು ಸ್ಪಷ್ಟಪಡಿಸಿದರು. “ಭೋಜನ ಕೂಟದಲ್ಲಿ ರಾಜಕೀಯ ಚರ್ಚೆ ಆಗಿಲ್ಲ. ಊಟ ಮಾತ್ರ ಚೆನ್ನಾಗಿತ್ತು. ಅಲ್ಲಿ ಮಟನ್, ಚಿಕನ್, ಬಿರಿಯಾನಿಯ ಬಗ್ಗೆ ಮಾತ್ರ ಮಾತುಕತೆ ನಡೆಯಿತು,” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿನ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ‘ನಂಬರ್ ಗೇಮ್’ ನಡೆಯುತ್ತಿದೆ ಎಂಬ ಊಹಾಪೋಹಗಳನ್ನು ಸೋಮಶೇಖರ್ ತಳ್ಳಿಹಾಕಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಹೈಕಮಾಂಡ್ ನಿರ್ಧಾರವೇ ಅಂತಿಮ’ ಎಂದು ದೃಢವಾಗಿ ಹೇಳಿದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆಯನ್ನೇ ಉದಾಹರಣೆಯಾಗಿ ನೀಡಿದರು. ಇದರ ಜೊತೆಗೆ, ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರ ಬ್ಯಾಟ್ ಬೀಸಿದ ಸೋಮಶೇಖರ್, “ಡಿ.ಕೆ. ಶಿವಕುಮಾರ್ ಅವರು ಎಂಟು ಬಾರಿ ಶಾಸಕರಾಗಿ, ಹಲವು ಮಹತ್ವದ ಇಲಾಖೆಗಳ ಮಂತ್ರಿಯಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ಅಪಾರವಾಗಿ ದುಡಿದಿದ್ದಾರೆ. ಹೀಗಾಗಿ, ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಬೇಕು,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

error: Content is protected !!