ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯದ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ‘ನವೆಂಬರ್ ಕ್ರಾಂತಿ’ ಊಹಾಪೋಹಗಳನ್ನು ತಳ್ಳಿಹಾಕಿದ್ದು, ತಮ್ಮ ತಂದೆ ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, “ನನ್ನ ತಂದೆಯವರು ಐದು ವರ್ಷ ಸಿಎಂ ಆಗಿ ಇರಬೇಕು. ರಾಜ್ಯಕ್ಕೆ ಇದರಿಂದ ಒಳ್ಳೆಯದಾಗುತ್ತದೆ” ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಕ್ರಾಂತಿ ವಿಚಾರಕ್ಕೆ ತೆರೆ: ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬ ಮಾತುಗಳ ಬಗ್ಗೆ ಮಾತನಾಡಿದ ಅವರು, “ಯಾವ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ ನನಗೆ ಗೊತ್ತಿಲ್ಲ. ನನ್ನ ತಂದೆಯವರು ನೀಡಿರುವ ಮಾಹಿತಿಯ ಪ್ರಕಾರ, ಹೈಕಮಾಂಡ್ ಆಗಲಿ, ಬೇರೆ ನಾಯಕರಾಗಲಿ ಯಾರೂ ಕೂಡ ನವೆಂಬರ್ ಆದ ಮೇಲೆ ಅಧಿಕಾರ ಬಿಡಲು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, “ರಾಜಕೀಯದಲ್ಲಿ ಯಾವಾಗ ಏನಾದರೂ ಆಗಬಹುದು ನಿಜ. ಆದರೆ, ಈಗಿನ ಪರಿಸ್ಥಿತಿಯನ್ನು ನೋಡಿದರೆ ನಮ್ಮ ತಂದೆಯವರು 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ” ಎಂದರು.
ಶಾಸಕರ ಸಂಪೂರ್ಣ ಬೆಂಬಲ: ಸಿದ್ದರಾಮಯ್ಯನವರಿಗೆ ಶಾಸಕರ ಬೆಂಬಲ ಇಲ್ಲ ಎಂಬ ಮಾತುಗಳನ್ನು ಯತೀಂದ್ರ ತಳ್ಳಿಹಾಕಿದರು. “ಸಿದ್ದರಾಮಯ್ಯ ಅವರಿಗೆ ಶಾಸಕರ ಸಂಪೂರ್ಣ ಬೆಂಬಲವಿದೆ. ಬೆಂಬಲ ಇಲ್ಲ ಅಂದಿದ್ರೆ ಶಾಸಕರು ಸುಮ್ಮನೆ ಇರ್ತಿದ್ರಾ? ಹೈಕಮಾಂಡ್‌ಗೆ ಹೋಗಿ ದೂರು ಕೊಡುತ್ತಿದ್ದರು” ಎಂದು ಹೇಳುವ ಮೂಲಕ ಸಿಎಂ ಸ್ಥಾನ ಭದ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

