ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ಹಿನ್ನೆಲೆ ಅರಮನೆಯ ಒಳಗಡೆ ರಾಜ ವಂಶಸ್ಥರು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾರೆ. ಈ ನಿಮಿತ್ತ 5 ದಿನಗಳ ಕಾಲ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ಸೆ.16ರ ಬೆಳಗ್ಗೆ 8.30 ರಿಂದ 1 ರವರೆಗೆ ಸಿಂಹಾಸನ ಜೋಡಣೆ, ಸೆ.22 ರಂದು ಬೆಳಗ್ಗೆಯಿಂದ 2 ಗಂಟೆಯವರೆಗೆ ಖಾಸಗಿ ದರ್ಬಾರ್ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಿಮಿತ್ತ, ಅ. 1 ಆಯುಧ ಪೂಜೆ, ಅ. 2 ವಿಜಯದಶಮಿ ದಿನ ಪೂರ್ತಿ ಅರಮನೆಗೆ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಜೊತೆಗೆ ಅ. 31 ರಂದು ಬೆಳಗ್ಗೆಯಿಂದ 12 ಗಂಟೆಯವರೆಗೆ ಸಿಂಹಾಸನ ವಿಸರ್ಜನೆ ನಿಮಿತ್ತ ಈ 5 ದಿನಗಳ ಕಾಲ ಅರಮನೆಗೆ ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ.
ಅರಮನೆಯ ರಾಜವಂಶಸ್ಥರು ನಡೆಸುವ ಶರನ್ನವರಾತ್ರಿಯ ಸಾಂಪ್ರದಾಯಿಕ ದಸರಾ ಪೂಜೆಗಳಿಗೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಅರಮನೆಗೆ ಪ್ರವಾಸಿಗರಿಗೆ ನಿರ್ಬಂಧದ ಜೊತೆಗೆ ಸೆ.15 ರಿಂದ ಅ.12 ರವರೆಗೆ ಅರಮನೆಯಲ್ಲಿ ನಡೆಯುವ ಧ್ವನಿ ಬೆಳಕು ಕಾರ್ಯಕ್ರಮ ಕೂಡ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.
ಸೆ.22 ರಂದು ಅರಮನೆಯಲ್ಲಿ ಶರನ್ನವರಾತ್ರಿಯ ಮೊದಲ ದಿನ ರಾಜವಂಶಸ್ಥ ಯದುವೀರ್ ಒಡೆಯರ್ ದರ್ಬಾರ್ ಹಾಲ್ನಲ್ಲಿ ಇರುವ ಚಿನ್ನದ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿ ಹಾಗೂ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ನಂತರ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ದಿನ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರಮನೆಗೆ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಇದಾದ ಬಳಿಕ ಅ.1 ರಂದು ಆಯುಧ ಪೂಜೆ ಹಾಗೂ ಅ.2 ರಂದು ವಿಜಯದಶಮಿ ಪೂಜೆ ಇರುವ ಕಾರಣ ದಿನವಿಡೀ ಅರಮನೆಗೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಬಳಿಕ ಅ.31 ರಂದು ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಿಂಹಾಸನ ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ಅಂದು ಸಹ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ಇರಲಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದರು.